ಡಬಲ್ಸ್, ಮಿಶ್ರ ಡಬಲ್ಸ್: ಸಾನಿಯಾ ಮೂರನೆ ಸುತ್ತಿಗೆ ಲಗ್ಗೆ

Update: 2017-07-09 18:44 GMT

ಲಂಡನ್, ಜು.9: ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಝಾ ವಿಂಬಲ್ಡನ್ ಟೂರ್ನಿಯ ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮೂರನೆ ಸುತ್ತು ಪ್ರವೇಶಿಸಿದ್ದಾರೆ.

ಪೂರವ್ ರಾಜಾ ಹಾಗೂ ರೋಹನ್ ಬೋಪಣ್ಣ ಮಿಶ್ರ ಡಬಲ್ಸ್ ವಿಭಾಗದಲ್ಲಿ ಗೆಲುವು ಸಾಧಿಸಿದ್ದಾರೆ.
 ಇಲ್ಲಿ ಶನಿವಾರ 1 ಗಂಟೆ, 45 ನಿಮಿಷಗಳ ಕಾಲ ನಡೆದ ಮಹಿಳೆಯರ ಡಬಲ್ಸ್‌ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸಾನಿಯಾ ಹಾಗೂ ಬೆಲ್ಜಿಯಂನ ಕರ್ಸ್ಟನ್ ಫ್ಲಿಪ್‌ಕಿನ್ಸ್ ಬ್ರಿಟನ್‌ನ ನಯೊಮಿ ಬ್ರಾಡಿ ಹಾಗೂ ಹೀದರ್ ವ್ಯಾಟ್ಸನ್‌ರನ್ನು 6-3, 3-6, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. 13ನೆ ಶ್ರೇಯಾಂಕದ ಸಾನಿಯಾ-ಕರ್ಸ್ಟನ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಮೂರನೆ ಶ್ರೇಯಾಂಕದ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಹಾಗೂ ಚೈನೀಸ್ ತೈಪೆಯ ಯಂಗ್-ಜಾನ್ ಚಾನ್‌ರನ್ನು ಎದುರಿಸಲಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಕ್ರೊಯೇಷಿಯದ ಇವಾನ್ ಡೊಡಿಗ್‌ರೊಂದಿಗೆ ಕಣಕ್ಕಿಳಿದ ಸಾನಿಯಾ ಜಪಾನ್‌ನ ಯುಸುಕೆ ವಟಾನುಕಿ ಹಾಗೂ ಮಕೊಟೊ ನಿನೊಮಿಯಾರನ್ನು 7-6(5), 6-2 ಸೆಟ್‌ಗಳಿಂದ ಮಣಿಸಿ ಮೂರನೆ ಸುತ್ತು ಪ್ರವೇಶಿಸಿದರು.
ಜಪಾನ್‌ನ ಎನ್ರಿ ಹೊಝುಮಿ ಅವರೊಂದಿಗೆ ಮಿಶ್ರ ಡಬಲ್ಸ್ ಆಡಿದ ರಾಜಾ ಅಮೆರಿಕ-ರೆುಕ್ ಜೋಡಿ ಜೇಮ್ಸ್ ಹಾಗೂ ರೆನಾಟಾರನ್ನು 5-7, 6-4, 6-2 ಅಂತರದಿಂದ ಮಣಿಸಿದರು.

ಕಳೆದ ತಿಂಗಳು ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದ ರೋಹನ್ ಬೋಪಣ್ಣ ಹಾಗೂ ಗ್ಯಾಬ್ರಿಯೆಲಾ ಡಾಬ್ರೊಸ್ಕಿ ಮಿಶ್ರ ಡಬಲ್ಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದರು. 10ನೆ ಶ್ರೇಯಾಂಕದ ಇಂಡೋ-ಕೆನಡಾ ಜೋಡಿ ಫ್ರೆಂಚ್-ರೊಮಾನಿಯದ ಫ್ಯಾಬ್ರಿಸ್ ಮಾರ್ಟಿನ್ ಹಾಗೂ ರಾಲುಕಾ ಒಲಾರು ಅವರನ್ನು 7-6(2), 7-5 ಸೆಟ್‌ಗಳಿಂದ ಸೋಲಿಸಿ ಮೂರನೆ ಸುತ್ತಿಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News