×
Ad

ವಿಶ್ವದ ನಂ.1 ಆಟಗಾರ್ತಿ ಕೆರ್ಬರ್ ಔಟ್, ಮರ್ರೆ, ವೀನಸ್ ಕ್ವಾ.ಫೆನಲ್‌ಗೆ

Update: 2017-07-10 23:45 IST

  ಲಂಡನ್, ಜು.10: ವಿಶ್ವದ ನಂ.1 ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ವಿಂಬಲ್ಡನ್ ಟೂರ್ನಿಯ ಅಂತಿಮ-16 ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ. ಬ್ರಿಟನ್‌ನ ಆ್ಯಂಡಿ ಮರ್ರೆ, ಅಮೆರಿಕದ ಆಟಗಾರ್ತಿ ವೀನಸ್ ವಿಲಿಯಮ್ಸ್, ವಿಂಬಲ್ಡನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಜೊಹನ್ನಾ ಕೊಂಟಾ 33 ವರ್ಷಗಳ ಬಳಿಕ ಅಂತಿಮ-8ರ ಹಂತ ತಲುಪಿದ ಮೊದಲ ಬ್ರಿಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪೊಲೆಂಡ್‌ನ ಅಗ್ನೆಸ್ಕಾ ರಾಂಡ್ವಾಂಸ್ಕಾರನ್ನು 6-2, 6-4 ನೇರ ಸೆಟ್‌ಗಳಿಂದ ಮಣಿಸಿರುವ ರಶ್ಯದ ಸ್ವೆತ್ಲಾನಾ ಕುಝ್ನೆಸೋವಾ ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಯಾಗಿದ್ದಾರೆ. ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಕೆರ್ಬರ್ ಸ್ಪೇನ್‌ನ ಗಾರ್ಬೈನ್ ಮುಗುರುಝ ವಿರುದ್ಧ 4-6, 6-4, 6-4 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಮುಗುರುಝ ಸತತ 5ನೆ ಬಾರಿ ಕೆರ್ಬರ್ ವಿರುದ್ಧ ಜಯ ದಾಖಲಿಸಿ ಪ್ರಾಬಲ್ಯ ಮೆರೆದಿದ್ದಾರೆ. ಮುಗುರುಝ ಮುಂದಿನ ಸುತ್ತಿನಲ್ಲಿ ರಶ್ಯದ ಸ್ವೆತ್ಲಾನಾ ಕುಝ್ನೆಸೋವಾರನ್ನು ಎದುರಿಸಲಿದ್ದಾರೆ.

ರಶ್ಯದ 7ನೆ ಶ್ರೇಯಾಂಕದ ಕುಝ್ನೆಸೋವಾ ಪೊಲೆಂಡ್‌ನ ರಾಂಡ್ವಾಂಸ್ಕಾರನ್ನು ಮಣಿಸಿ 10 ವರ್ಷಗಳ ಬಳಿಕ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಸೋಮವಾರ ಸೆಂಟರ್ ಕೋರ್ಟ್‌ನಲ್ಲಿ ನಡೆದ ಮತ್ತೊಂದು ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಕ್ರೊಯೇಷಿಯದ ಅನಾ ಕಾಂಜು ಅವರನ್ನು 6-3, 6-2 ಸೆಟ್‌ಗಳಿಂದ ಮಣಿಸಿರುವ 37ರ ಹರೆಯದ ವೀನಸ್ ವಿಲಿಯಮ್ಸ್ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ ಹಿರಿಯ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು. ವೀನಸ್ 23 ವರ್ಷಗಳ ಬಳಿಕ ಈ ಸಾಧನೆ ಮಾಡಿದ್ದಾರೆ. 1994ರಲ್ಲಿ ಮಾರ್ಟಿನಾ ನವ್ರಾಟಿಲೋವಾ ಅಂತಿಮ-8ರ ಹಂತ ತಲುಪಿದ್ದ ಹಿರಿಯ ಆಟಗಾರ್ತಿ ಎನಿಸಿಕೊಂಡಿದ್ದರು.

ಐದು ಬಾರಿಯ ಚಾಂಪಿಯನ್ ವೀನಸ್ 1997ರಲ್ಲಿ ವಿಂಬಲ್ಡನ್ ಟೂರ್ನಿಯಲ್ಲಿ ಚೊಚ್ಚಲ ಪಂದ್ಯ ಆಡಿದ ಸಂದರ್ಭದಲ್ಲಿ 19 ವರ್ಷದ ಅನಾ ಕಾಂಜು ಆಗಿನ್ನೂ ಹುಟ್ಟಿರಲಿಲ್ಲ. ವೀನಸ್ ಮಂಗಳವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊರನ್ನು ಎದುರಿಸಲಿದ್ದಾರೆ.

ಮರ್ರೆ ಸತತ 10ನೆ ಬಾರಿ ಕ್ವಾರ್ಟರ್ ಫೈನಲ್‌ಗೆ

ಹಾಲಿ ಚಾಂಪಿಯನ್ ಆ್ಯಂಡಿ ಮರ್ರೆ ಫ್ರಾನ್ಸ್‌ನ ಬೆನೊಟ್ ಪೈರೆ ಅವರನ್ನು ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ 7-6(7/1), 6-4, 6-4 ಸೆಟ್‌ಗಳಿಂದ ಮಣಿಸಿ ಸತತ 10ನೆ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ವಿಶ್ವದ ನಂ.1 ಆಟಗಾರ ಮರ್ರೆ ಮುಂದಿನ ಸುತ್ತಿನಲ್ಲಿ ಸ್ಯಾಮ್ ಕ್ವೆರ್ರಿಯವರನ್ನು ಎದುರಿಸಲಿದ್ದಾರೆ.

ಸಾನಿಯಾ ಡಬಲ್ಸ್ ಸವಾಲು ಅಂತ್ಯ

 ಸಾನಿಯಾ ಮಿರ್ಝಾ ಹಾಗೂ ಅವರ ಬೆಲ್ಜಿಯ ಜೊತೆಗಾರ್ತಿ ಕರ್ಸ್ಟನ್ ಪ್ಲಿಪ್ಕಿನ್ಸ್ ಮಹಿಳೆಯರ ಡಬಲ್ಸ್‌ನ 3ನೆ ಸುತ್ತಿನ ಪಂದ್ಯದಲ್ಲಿ 2-6, 4-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಈ ಸೋಲಿನೊಂದಿಗೆ ಸಾನಿಯಾರ ಡಬಲ್ಸ್ ಸವಾಲು ಕೊನೆಗೊಂಡಿತು.

ಅಝೆರೆಂಕಾ ಕನಸು ಭಗ್ನಗೊಳಿಸಿದ ಹಾಲೆಪ್

ಡಿಸೆಂಬರ್‌ನಲ್ಲಿ ಮೊದಲ ಪುತ್ರನಿಗೆ ಜನ್ಮ ನೀಡಿದ ಬಳಿಕ 2ನೆ ಗ್ರಾನ್‌ಸ್ಲಾಮ್ ಟೂರ್ನಿಯನ್ನು ಆಡಿದ ವಿಕ್ಟೋರಿಯ ಅಝರೆಂಕಾ ವಿಂಬಲ್ಡನ್‌ನ 4ನೆ ಸುತ್ತಿನಲ್ಲಿ ಸಿಮೊನಾ ಹಾಲೆಪ್ ವಿರುದ್ಧ 7-6(3), 3-2 ಸೆಟ್‌ಗಳಿಂದ ಸೋತಿದ್ದಾರೆ. ಬೆಲಾರಸ್ ಆಟಗಾರ್ತಿಯ ಪ್ರಶಸ್ತಿ ಜಯಿಸಬೇಕೆಂಬ ಕನಸು ಭಗ್ನಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News