ಹೆಡ್ ಕೋಚ್: ರವಿ ಶಾಸ್ತ್ರಿಯನ್ನು 'ರನ್ ಔಟ್' ಮಾಡಿದ ಬಿಸಿಸಿಐ
Update: 2017-07-11 18:34 IST
ಮುಂಬೈ, ಜು.11: ಟೀಮ್ ಇಂಡಿಯಾದ ಕೋಚ್ ಆಗಿ ರವಿಶಾಸ್ತ್ರಿ ನೇಮಕದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರನ್ನು ಈ ಹುದ್ದೆಗೆ ನೇಮಕ ಮಾಡಿಲ್ಲ. ರವಿಶಾಸ್ತ್ರಿ ಕೋಚ್ ಆಗಿ ನೇಮಕ ಮಾಡಿರುವುದನ್ನು ಯಾರೂ ಪ್ರಕಟಿಸಿಲ್ಲ ಎಂದು ಹೇಳಿದ್ದಾರೆ.
ರವಿಶಾಸ್ತ್ರಿ ಕೋಚ್ ಆಗಿ ನೇಮಕಗೊಂಡ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡ ಒಂದು ಗಂಟೆಯ ಬಳಿಕ ಅಮಿತಾಭ್ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮುಂಬೈನ ಮುಖ್ಯ ಕಚೇರಿಯಲ್ಲಿ ಸೋಮವಾರ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಮೂವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿಯು ಕೋಚ್ ಹುದ್ದೆಗೆ ಸಲ್ಲಿಸಿದ ಆರು ಮಂದಿಯ ಸಂದರ್ಶನ ನಡೆಸಿತ್ತು. ರವಿಶಾಸ್ತ್ರಿ ಲಂಡನ್‌ನಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂದರ್ಶನಕ್ಕೆ ಹಾಜರಾಗಿದ್ದರು.