×
Ad

ವಿಂಬಲ್ಡನ್ ಟೂರ್ನಿ: ಫೆಡರರ್ ಕ್ವಾರ್ಟರ್ ಫೈನಲ್‌ಗೆ, ನಡಾಲ್ ನಿರ್ಗಮನ

Update: 2017-07-11 23:51 IST

ವಿಂಬಲ್ಡನ್, ಜು.11: ಗ್ರಿಗೊರ್ ಡಿಮಿಟ್ರೊವ್‌ರನ್ನು ನೇರ ಸೆಟ್‌ಗಳಿಂದ ಮಣಿಸಿರುವ ರೋಜರ್ ಫೆಡರರ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 50ನೆ ಬಾರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸ್ವಿಸ್ ಆಟಗಾರ ಫೆಡರರ್ ಅವರು ಡಿಮಿಟ್ರೊವ್‌ರನ್ನು 6-4, 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ವಿಂಬಲ್ಡನ್ ಟೂರ್ನಿಯಲ್ಲಿ 15ನೆ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು.

ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ಫೆಡರರ್ ಮುಂದಿನ ಸುತ್ತಿನಲ್ಲಿ ಕೆನಡಾದ ಮಿಲೊಸ್ ರಾವೊನಿಕ್‌ರನ್ನು ಎದುರಿಸಲಿದ್ದಾರೆ. 2016ರ ವಿಂಬಲ್ಡನ್ ಸೆಮಿ ಫೈನಲ್‌ನಲ್ಲಿ ರಾವೊನಿಕ್ ಅವರು ಫೆಡರರ್‌ರನ್ನು ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ರಾವೊನಿಕ್ ಜಯಭೇರಿ ಬಾರಿಸಿದ್ದರು.

35ರ ಪ್ರಾಯದ ಫೆಡರರ್ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿರುವ ಎರಡನೆ ಹಿರಿಯ ಆಟಗಾರನಾಗಿದ್ದಾರೆ. 1971ರಲ್ಲಿ ಕೆನ್ ರೊಸ್‌ವೆಲ್ ತನ್ನ 39ನೆ ವಯಸ್ಸಿನಲ್ಲಿ ಅಂತಿಮ-8ರ ಹಂತ ತಲುಪಿರುವ ಅತ್ಯಂತ ಹಿರಿಯ ಆಟಗಾರನಾಗಿದ್ದರು.

ಮತ್ತೊಮ್ಮೆ ಕ್ವಾರ್ಟರ್ ಫೈನಲ್ ತಲುಪಿರುವುದಕ್ಕೆ ತುಂಬಾ ಸಂತೋಷವಾಗಿದೆ. ವಿಂಬಲ್ಡನ್‌ನಲ್ಲಿ 15ನೆ ಬಾರಿ ಕ್ವಾರ್ಟರ್ ಫೈನಲ್ ತಲುಪಿರುವುದು ನನ್ನ ಪಾಲಿಗೆ ತುಂಬಾ ವಿಶೇಷವಾಗಿದೆ ಎಂದು ಡಿಮಿಟ್ರೊವ್ ವಿರುದ್ಧ ಈತನಕ ಆಡಿರುವ ಎಲ್ಲ 6 ಪಂದ್ಯಗಳನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿರುವ ಫೆಡರರ್ ನುಡಿದರು.

2016ರ ವಿಂಬಲ್ಡನ್‌ನಲ್ಲಿ ರನ್ನರ್-ಅಪ್ ಆಗಿರುವ ಮಿಲೊಸ್ ರಾವೊನಿಕ್ ಜರ್ಮನಿಯ ಉದಯೋನ್ಮುಖ ಆಟಗಾರ ಅಲೆಕ್ಸಾಂಡರ್ ಝ್ವೆರೆವ್‌ರನ್ನು 4-6, 7-5, 4-6, 7-5, 6-1 ಸೆಟ್‌ಗಳ ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News