ವಿಶ್ವಕ್ಕೇ ನಂ .1 ನಮ್ಮ ಮಿಥಾಲಿ ರಾಜ್ !

Update: 2017-07-12 12:37 GMT

ಲಂಡನ್, ಜು.12: ಮಹಿಳೆಯರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಎನಿಸಿಕೊಂಡಿರುವ ಭಾರತದ ನಾಯಕಿ ಮಿಥಾಲಿ ರಾಜ್ ಹೊಸ ಇತಿಹಾಸ ನಿರ್ಮಿಸಿದರು.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಐಸಿಸಿ ವಿಶ್ವಕಪ್‌ನಲ್ಲಿ ಭಾರತವನ್ನು ನಾಯಕಿಯಾಗಿ ಮುನ್ನಡೆಸುತ್ತಿರುವ ಮಿಥಾಲಿ ಆಸ್ಟ್ರೇಲಿಯ ವಿರುದ್ಧ ಬ್ರಸ್ಟೊಲ್‌ನಲ್ಲಿ ಬುಧವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಈ ಸಾಧನೆ ಮಾಡಿದರು. ಕರ್ಸ್ಟನ್ ಬೀಮ್ಸ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಮಿಥಾಲಿ ಏಕದಿನ ಕ್ರಿಕೆಟ್‌ನಲ್ಲಿ 6,000ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎನಿಸಿಕೊಂಡರು. ಆಸ್ಟ್ರೇಲಿಯ ವಿರುದ್ಧ ಪಂದ್ಯಕ್ಕಿಂತ ಮೊದಲು ಈ ಸಾಧನೆ ಮಾಡಲು ಮಿಥಾಲಿಗೆ 34 ರನ್ ಅಗತ್ಯವಿತ್ತು. ಮಿಥಾಲಿ ಈ ಸಾಧನೆಯ ಮೂಲಕ ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ಸ್(5,992) ದಾಖಲೆಯನ್ನು ಮುರಿದರು. 34ರ ಹರೆಯದ ಮಿಥಾಲಿ ತಾನಾಡಿರುವ 183ನೆ ಏಕದಿನ ಪಂದ್ಯದ 164ನೆ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

1999ರ ಜೂನ್‌ನಲ್ಲಿ ಐರ್ಲೆಂಡ್ ವಿರುದ್ಧ ಚೊಚ್ಚಲ ಏಕದಿನ ಕ್ರಿಕೆಟ್ ಆಡಿರುವ ಮಿಥಾಲಿ ಪ್ರಸ್ತುತ ವಿಶ್ವಕಪ್‌ನ ವೇಳೆ ಸತತ 7 ಅರ್ಧಶತಕಗಳನ್ನು ಸಿಡಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು.

ಮಿಥಾಲಿ ತನ್ನ 18 ವರ್ಷಗಳ ವೃತ್ತಿಜೀವನದಲ್ಲಿ ದಾಖಲಿಸಿದ ಅಂಕಿ-ಅಂಶಗಳ ಮೈಲುಗಲ್ಲು ಇಂತಿವೆ...

1: ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ 6,000 ರನ್ ಪೂರೈಸಿದ ಮೊದಲ ಆಟಗಾರ್ತಿ. ಯಾವ ಮಹಿಳಾ ಆಟಗಾರ್ತಿ ಈ ಸಾಧನೆ ಮಾಡಿಲ್ಲ. ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ 5,992 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು.

 48: ಮಿಥಾಲಿ ಏಕದಿನ ಕ್ರಿಕೆಟ್‌ನಲ್ಲಿ 48 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದು ಮಹಿಳಾ ಆಟಗಾರ್ತಿಯ ಶ್ರೇಷ್ಠ ಸಾಧನೆಯಾಗಿದೆ. ಎಡ್ವರ್ಡ್ಸ್ 46 ಬಾರಿ ಅರ್ಧಶತಕ ಬಾರಿಸಿದ್ದಾರೆ.

7: ವಿಶ್ವಕಪ್ ಪೂರ್ವ ಹಾಗೂ ವಿಶ್ವಕಪ್‌ನ ವೇಳೆ ಮಿಥಾಲಿ ಸತತ ಏಳು ಅರ್ಧಶತಕಗಳನ್ನು ಪೂರೈಸಿದ ವಿಶ್ವದ ಮೊದಲ ಆಟಗಾರ್ತಿ.

3: ಮಿಥಾಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 50ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಿಶ್ವದ 3ನೆ ಆಟಗಾರ್ತಿ. ಆಸ್ಟ್ರೇಲಿಯ ಮೆಕ್ ಲ್ಯಾನ್ನಿಂಗ್(54.12) ಗರಿಷ್ಠ ಸರಾಸರಿ ಹೊಂದಿದ್ದು, ಎಲ್ಲಿಸ್ ಪೆರ್ರಿ ಎರಡನೆ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News