ಮಹಿಳೆಯರ ಸಿಂಗಲ್ಸ್: ಮುಗುರುಝ-ವೀನಸ್ ಫೆನಲ್

Update: 2017-07-13 18:21 GMT

ಲಂಡನ್, ಜು.13: ಐದು ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್ ಹಾಗೂ ಸ್ಪೇನ್‌ನ ಗಾರ್ಬೆನ್ ಮುಗುರುಝ ವಿಂಬಲ್ಡನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

ಇಲ್ಲಿನ ಸೆಂಟರ್‌ಕೋರ್ಟ್‌ನಲ್ಲಿ ಗುರುವಾರ ನಡೆದ ಎರಡನೆ ಸೆಮಿ ಫೈನಲ್‌ನಲ್ಲಿ ವೀನಸ್ ಬ್ರಿಟನ್‌ನ ಜೊಹನ್ನಾ ಕೊಂಟಾರನ್ನು 6-4, 6-2 ನೇರ ಸೆಟ್‌ಗಳಿಂದ ಸೋಲಿಸಿದರು. 2009ರ ಬಳಿಕ ಮೊದಲ ಬಾರಿ ವಿಂಬಲ್ಡನ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದರು.

ಕೊಂಟಾ 1977ರ ಬಳಿಕ ತವರು ನೆಲದಲ್ಲಿ ವಿಂಬಲ್ಡನ್ ಫೈನಲ್ ತಲುಪಿದ ಮೊದಲ ಬ್ರಿಟನ್ ಆಟಗಾರ್ತಿಯಾಗುವ ಕನಸು ಕಂಡಿದ್ದರು. ಆದರೆ, ಕಾಂಟಾ ಕನಸನ್ನು ಭಗ್ನಗೊಳಿಸಿದ 37ರ ಹರೆಯದ ವೀನಸ್ ಶನಿವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದು, ಫೈನಲ್‌ನಲ್ಲಿ ಗಾರ್ಬೈನ್ ಮುಗುರುಝರನ್ನು ಎದುರಿಸಲಿದ್ದಾರೆ.

ಕೇವಲ 64 ನಿಮಿಷಗಳಲ್ಲಿ ಕೊನೆಗೊಂಡ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಮುಗುರುಝ ಅವರು ಸ್ಲೊವಾಕಿಯಾದ ಮಗ್ಡೆಲಿನಾ ರಿಬರಿಕೋವಾರನ್ನು 6-1, 6-1 ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು. ಈ ಮೂಲಕ 3 ವರ್ಷಗಳಲ್ಲಿ ಎರಡನೆ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದರು.

 23ರ ಹರೆಯದ ಮುಗುರುಝ 2015ರ ವಿಂಬಲ್ಡನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ ವಿರುದ್ಧ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದ್ದರು.
 ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದ ಮುಗುರುಝ 1990ರ ಬಳಿಕ ಎರಡು ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ ಸ್ಪೇನ್‌ನ ಮೊದಲ ಆಟಗಾರ್ತಿಯಾಗಿದ್ದಾರೆ. ಈ ಹಿಂದೆ ಅರಾಂಟ್‌ಕ್ಸಾ ಸ್ಯಾಂಚೆಝ್ ಈ ಸಾಧನೆ ಮಾಡಿದ್ದರು.
9 ವರ್ಷಗಳ ಬಳಿಕ ವಿಂಬಲ್ಡನ್ ಸೆಮಿಫೈನಲ್‌ಗೆ ತಲುಪಿದ್ದ ಕೆಳ ರ್ಯಾಂಕಿನ ಆಟಗಾರ್ತಿಯಾಗಿದ್ದ ರಿಬಾರಿಕೋವಾ ಅವರು ಮುಗುರುಝಗೆ ಯಾವುದೇ ಹಂತದಲ್ಲಿ ಪ್ರತಿರೋಧ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News