2011ರ ವಿಶ್ವಕಪ್ ಸೋಲಿನ ತನಿಖೆಯಾಗಬೇಕು: ರಣತುಂಗ
ಕೊಲಂಬೊ, ಜು.14: ಶ್ರೀಲಂಕಾ ಹಾಗೂ ಭಾರತದ ನಡುವೆ 2011ರ ವಿಶ್ವಕಪ್ ಫೈನಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಶ್ರೀಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾ ಒತ್ತಾಯಿಸಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ತಂಡ ಆರು ವಿಕೆಟ್‌ಗಳ ಅಂತರದಿಂದ ಸೋತಾಗ ನನಗೆ ಆಘಾತವಾಗಿತ್ತು. ಆಗ ನಾನು ವೀಕ್ಷಕವಿವರಣೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಆಗ ನನಗೆ ಆ ಪಂದ್ಯದ ಮೇಲೆ ಅನುಮಾನವೂ ಬಂದಿತ್ತು. 2011ರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ತಂಡ ಸೋಲಲು ಕಾರಣವೇನೆಂದು ತನಿಖೆ ನಡೆಸಬೇಕಾದ ಅಗತ್ಯವಿದೆ. ನಾನು ಎಲ್ಲ ವಿಷಯವನ್ನು ಬಹಿರಂಗಪಡಿಸಲಾರೆ ಎಂದು ಫೇಸ್‌ಬುಕ್ ಪೇಜ್‌ನಲ್ಲಿ ಹಾಕಿರುವ ವಿಡಿಯೋವೊಂದರಲ್ಲಿ ರಣತುಂಗಾ ಹೇಳಿದ್ದಾರೆ.
ಆಟಗಾರರು ತಮ್ಮ ಶುಭ್ರವಾದ ಬಿಳಿ ಕ್ರಿಕೆಟ್ ಬಟ್ಟೆಯ ಮೇಲೆ ಕಪ್ಪು ಬಣ್ಣವನ್ನು ಅಡಗಿಸಿಟ್ಟುಕೊಳ್ಳಬಾರದು ಎಂದು ಆಟಗಾರರ ಹೆಸರನ್ನು ಉಲ್ಲೇಖಿಸದೇ ರಣತುಂಗಾ ಹೇಳಿದರು.
2011ರ ವಿಶ್ವಕಪ್ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 274 ರನ್ ಗಳಿಸಿತ್ತು. ಭಾರತ ತಂಡ ರನ್ ಬೆನ್ನಟ್ಟುವಾಗ ಚಾಂಪಿಯನ್ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್‌ರನ್ನು ಬೇಗನೆ ಕಳೆದುಕೊಂಡಿತ್ತು. ಸಚಿನ್ 18 ರನ್ ಗಳಿಸಿ ಔಟಾಗಿದ್ದರು. ಆದರೆ, ಶ್ರೀಲಂಕಾದ ಕಳಪೆ ಫೀಲ್ಡಿಂಗ್ ಹಾಗೂ ಬೌಲಿಂಗ್‌ನ ಲಾಭ ಪಡೆದಿದ್ದ ಭಾರತ ಆ ಪಂದ್ಯವನ್ನು ಗೆದ್ದುಕೊಂಡಿತ್ತು.
ಆಗ ಶ್ರೀಲಂಕಾದ ಮಾಧ್ಯಮಗಳು ಶ್ರೀಲಂಕಾ ಫೈನಲ್ ಪಂದ್ಯವನ್ನು ಉದ್ದೇಶಪೂರ್ವಕವಾಗಿ ಕೈಚೆಲ್ಲಿತ್ತು ಎಂದು ಆರೋಪಿಸಿದ್ದವು. ಆದರೆ, ಫೈನಲ್ ಪಂದ್ಯವನ್ನು ಈತನಕ ಅಧಿಕೃತವಾಗಿ ತನಿಖೆಗೆ ಗುರಿಪಡಿಸಲಾಗಿಲ್ಲ.