ಗಾಯಾಳು ವಿಜಯ್ ಬದಲಿಗೆ ಧವನ್‌ಗೆ ಸ್ಥಾನ

Update: 2017-07-17 18:54 GMT

ಹೊಸದಿಲ್ಲಿ, ಜು.17: ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಪ್ರವಾಸ ಸರಣಿಗೆ ಗಾಯಾಳು ಮುರಳಿ ವಿಜಯ್ ಬದಲಿಗೆ ಶಿಖರ್ ಧವನ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

 ಮುರಳಿ ವಿಜಯ್ ಮುಂದಿನ ಟೆಸ್ಟ್ ಸರಣಿಗೆ ಅಭ್ಯಾಸ ನಡೆಸುತ್ತಿದ್ದಾಗ ಮಣಿಗಂಟಿನ ನೋವು ಅವರಿಗೆ ಕಾಣಿಸಿಕೊಂಡಿದೆ. ಕಳೆದ ಆಸ್ಟ್ರೇಲಿಯ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿ ವೇಳೆ ಅವರಿಗೆ ಮಣಿಗಂಟಿನ ಗಾಯದ ಸಮಸ್ಯೆ ಅವರನ್ನು ಕಾಡಿತ್ತು.

 ತಂಡದ ಆಯ್ಕೆ ಸಮಿತಿಯು ಸೋಮವಾರ ಸಭೆ ಸೇರಿ ಮುರಳಿ ವಿಜಯ್ ಬದಲಿಗೆ ಶಿಖರ್ ಧವನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದೆ. ವೈದ್ಯಕೀಯ ವರದಿಯ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಶಿಖರ್ ಧವನ್ 2016ರ ಅಕ್ಟೋಬರ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಸರಣಿಯನ್ನು ಆಡಿದ್ದರು. 31ರ ಹರೆಯದ ಧವನ್ 23 ಟೆಸ್ಟ್‌ಗಳಲ್ಲಿ 38.52 ಸರಾಸರಿಯಂತೆ 1,464 ರನ್ , 4 ಶತಕ ಮತ್ತು 3 ಅರ್ಧಶತಕ ದಾಖಲಿಸಿದ್ದರು.

  ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಅಪೂರ್ವ ಫಾರ್ಮ್‌ನಲ್ಲಿದ್ದ ಧವನ್ ವೆಸ್ಟ್‌ಇಂಡೀಸ್ ವಿರುದ್ಧದ ಪ್ರವಾಸ ಸರಣಿಯಲ್ಲಿ ಮಳೆಗಾಹುತಿಯಾದ ಮೊದಲ ಏಕದಿನ ಪಂದ್ಯದಲ್ಲಿ 87 ರನ್, ಎರಡನೆ ಏಕದಿನ ಪಂದ್ಯದಲ್ಲಿ 63 ರನ್ ಗಳಿಸಿದ್ದರು. ಬಳಿಕ ಮೂರು ಪಂದ್ಯಗಳಲ್ಲಿ ಒಟ್ಟು 12 ರನ್ ಗಳಿಸುವ ಮೂಲಕ ಕಳಪೆ ಪ್ರದರ್ಶನ ನೀಡಿದ್ದರು. ಏಕೈಕ ಟ್ವೆಂಟಿ-20 ಪಂದ್ಯದಲ್ಲಿ 23 ರನ್ ಗಳಿಸಿ ಔಟಾಗಿದ್ದರು.

ಶ್ರೀಲಂಕಾ ಪ್ರವಾಸದಲ್ಲಿ ಭಾರತ ಮೂರು ಟೆಸ್ಟ್ ಪಂದ್ಯಗಳ ಸರಣಿ, ಐದು ಏಕದಿನ ಪಂದ್ಯ ಮತ್ತು 1 ಟ್ವೆಂಟಿ-20 ಪಂದ್ಯವನ್ನಾಡಲಿದೆ.
ಶ್ರೀಲಂಕಾ ವಿರುದ್ಧದ ಪ್ರವಾಸ ಸರಣಿ ಜುಲೈ 26ರಿಂದ ಆರಂಭಗೊಳ್ಳಲಿದೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ತಂಡ

ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ(ಉಪನಾಯಕ),ರೋಹಿತ್ ಶರ್ಮ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಇಶಾಂತ್ ಶರ್ಮ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಅಭಿನವ್ ಮುಕುಂದ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News