ಕ್ರಿಕೆಟಿಗ ಶಮಿ ಮನೆಗೆ ನುಗ್ಗಲು ಯತ್ನಿಸಿದ ಮೂವರು ಆರೋಪಿಗಳ ಸೆರೆ

Update: 2017-07-18 13:05 GMT

ಕೋಲ್ಕತಾ, ಜು.18: ರಸ್ತೆಯಲ್ಲಿ ನಡೆದ ವಿವಾದಕ್ಕೆ ಸಂಬಂಧಿಸಿ ಭಾರತದ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ ಮನೆಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಮೂವರು ಆರೋಪಿಗಳನ್ನು ಜಾಧವ್‌ಪುರ ಪೊಲೀಸರು ಬಂಧಿಸಿದ್ದಾರೆ.

 ಕಳೆದ ಶನಿವಾರ ಮೊಹಮ್ಮದ್ ಶಮಿ ಮತ್ತು ಪತ್ನಿಯೊಂದಿಗೆ ಮನೆಗೆ ವಾಪಸಾಗುತ್ತಿದ್ದಾಗ ಅವರ ಕಾರು ಮನೆಯ ಬಳಿ ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆಯಿತೆನ್ನಲಾಗಿದೆ.ಇದರಿಂದ ರೊಚ್ಚಿಗೆದ್ದ ಬೈಕ್ ಸವಾರ ಮತ್ತು ಆತನ ಸ್ನೇಹಿತರ ಗುಂಪು ವಾಗ್ವಾದ ನಡೆಸಿ ಅವರ ಮನೆಗೆ ನುಗ್ಗಲು ಯತ್ನಿಸಿತೆನ್ನಲಾಗಿದೆ.

    ಶಮಿ ಕಾರು ಬೈಕ್‌ಗೆ ಹೊಡೆಯುತ್ತಿದ್ದಂತೆ ಕಾರ್‌ನಿಂದ ಇಳಿದ ಕಾರು ಚಾಲಕ ಬೈಕ್ ಸವಾರರಲ್ಲಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಯತ್ನಿಸಿದರು. ಆದರೆ ಸಮಸ್ಯೆ ಬಗೆಹರಿಯದ ಇದ್ದಾಗ ಶಮಿ ಕಾರ್‌ನಿಂದ ಇಳಿದು ಅವರಲ್ಲಿ ಮಾತುಕತೆ ನಡೆಸಿದರು. ಅಷ್ಟರಲ್ಲಿ ಯುವಕರ ತಂಡ ಅಲ್ಲಿ ಜಮಾಯಿಸಿ ದಾಂದಲೆ ನಡೆಸಿದರು. ಶಮಿ ಮನೆಯ ಕಾವಲುಗಾರನಲ್ಲಿ ಅನುಚಿತವಾಗಿ ವರ್ತಿಸಿ ಶಮಿ ಮನೆಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದರೆಂದು ಪೊಲೀಸರು ತಿಳಿಸಿದ್ದಾರೆ.

 ಈ ಸಂಬಂಧ ಶಮಿ ಪತ್ನಿ ಹಸಿನಾ ಜಾಹನ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಜಾಧವ್‌ಪುರ ಪೊಲೀಸರು ಶಮಿ ಮನೆಯ ಸಿಸಿಟಿವಿಯ ದಾಖಲೆಯ ಆಧಾರದಲ್ಲಿ ಬೈಕ್ ಸವಾರ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News