ವೇಗಿ ಯಾದವ್ ಆರ್‌ಬಿಐ ಅಧಿಕಾರಿಯಾದ ಬೆನ್ನೆಲ್ಲೇ ಮನೆಗೆ ಕಳ್ಳರ ಲಗ್ಗೆ ..!

Update: 2017-07-18 14:56 GMT

ನಾಗ್ಪುರ, ಜು.18: ಭಾರತದ ಕ್ರಿಕೆಟ್ ತಂಡದ ವೇಗಿ ಉಮೇಶ್ ಯಾದವ್ ಆರ್‌ಬಿಐ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ನೇಮಕಗೊಂಡ ಖುಶಿಯಲ್ಲಿದ್ದಾಗಲೇ ಅವರ ಮನೆಗೆ ನುಗ್ಗಿದ ಕಳ್ಳರು 45 ಸಾವಿರ ರೂ. ನಗದು, ಮೊಬೈಲ್ ಫೋನ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

 ತಂದೆ ತಿಲಕ್ ಯಾದವ್ ತನ್ನ ಕಿರಿಯ ಮಗ ಉಮೇಶ್ ಯಾದವ್ ಸರಕಾರಿ ಅಧಿಕಾರಿಯಾಗುವ ಕನಸು ಕಂಡಿದ್ದರು. ಉಮೇಶ್ ಯಾದವ್ ದಶಕದ ಹಿಂದೆ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಅರ್ಜಿ ಹಾಕಿ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದರು. ಆದರೆ ಅವರಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸರಕಾರಿ ಕೆಲಸ ಪಡೆಯುವುದು ಅವರಿಗೆ ಕನಸಾಗಿಯೇ ಉಳಿದಿತ್ತು.

ಕಾನ್‌ಸ್ಟೇಬಲ್ ಕನಸು ಕಂಡ ಉಮೇಶ್ ಯಾದವ್ ಕಠಿಣ ಪರಿಶ್ರಮದ ಮೂಲಕ ವಿಶ್ವದ ವೇಗದ ಬೌಲರ್ ಆಗಿ ರೂಪುಗೊಂಡರು. ಇದೀಗ ಅವರಿಗೆ ಉನ್ನತ ಸರಕಾರಿ ಹುದ್ದೆ ಕೈ ಬೀಸಿ ಕರೆದಿದೆ. ಅದು ಕೂಡಾ ಪ್ರತಿಷ್ಠಿತ ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆ. ತವರಿನಲ್ಲಿರುವ ಆರ್‌ಬಿಐ ನಾಗ್ಪುರ ಶಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ.

29ರ ಹರೆಯದ ಉಮೇಶ್ ಯಾದವ್ ಶ್ರೀಲಂಕಾ ಪ್ರವಾಸ ಸರಣಿಗೆ ಅಣಿಯಾಗುವ ಮುನ್ನ ಸೋಮವಾರ ಬ್ಯಾಂಕ್ ಅಧಿಕಾರಿ ಹುದ್ದೆಗೆ ಸೇರಲು ಅಗತ್ಯದ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ್ದಾರೆಂದು ತಿಳಿದು ಬಂದಿದೆ.

 ಆರ್‌ಬಿಐ ಅಧಿಕಾರಿಯಾಗಿ ನೇಮಕಗೊಂಡ ಖುಶಿಯಲ್ಲಿದ್ದ ಉಮೇಶ್ ಯಾದವ್ ಶ್ರೀಲಂಕಾ ಪ್ರವಾಸ ಸರಣಿಗೆ ಮಂಗಳವಾರ ತೆರಳಬೇಕಿತ್ತು. ಆದರೆ ಅಷ್ಟುಹೊತ್ತಿಗೆ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಮನೆಯಲ್ಲಿದ್ದ ನಗದು , ಮೊಬೈಲ್ ಪೋನ್‌ಗಳನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಅವರ ಮನೆಯಿಂದ 45 ಸಾವಿರ ರೂ. ಕಳವಾಗಿದೆ ಎನ್ನಲಾಗಿದೆ. ಆದರೆ ಎಷ್ಟು ಮೊಬೈಲ್‌ಗಳು ಮತ್ತು ಏನೆಲ್ಲ ಅಮೂಲ್ಯ ವಸ್ತುಗಳು ಕಳವಾಗಿದೆ ಎಂಬ ವಿಚಾರ ಸ್ಪಷ್ಟಗೊಂಡಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News