ಮಹಿಳೆಯರ ಐಸಿಸಿ ವಿಶ್ವಕಪ್: ಇಂಗ್ಲೆಂಡ್ ಫೈನಲ್‌ಗೆ

Update: 2017-07-18 16:43 GMT

ಬ್ರಿಸ್ಟಲ್, ಜು.18:ಮಹಿಳೆಯರಐಸಿಸಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂದು ದಕ್ಷಿಣ ಆಫ್ರಿಕ ವಿರುದ್ಧ ಇಂಗ್ಲೆಂಡ್ 2 ವಿಕೆಟ್‌ಗಳ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ.ಗೆಲುವಿಗೆ 219 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ವಿಕೆಟ್ ಕೀಪರ್ ಸಾರಾ ಟೇಲರ್ ಅರ್ಧಶತಕದ ನೆರವಿನಲ್ಲಿ ಇನ್ನೂ 2 ಎಸೆತಗಳು ಬಾಕಿ ಇರುವಂತೆ 8 ವಿಕೆಟ್ ನಷ್ಟದಲ್ಲಿ 221 ರನ್ ಗಳಿಸುವ ಮೂಲಕ ಫೈನಲ್ ತಲುಪಿದೆ.

 ದಕ್ಷಿಣ ಆಫ್ರಿಕ 218  /6: ಹದಿನೆಂಟರ ಹರೆಯದ ಯುವ ಆಟಗಾರ್ತಿ ಲೌರಾ ವೋರ್ಲ್ವಾಡ್ತ್ ಮತ್ತು ಮಿಗ್ನಾನ್ ಡು ಪ್ರೀಝ್ ದಾಖಲಿಸಿದ ಅರ್ಧಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 218 ರನ್ ಗಳಿಸಿತ್ತು.

 ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕ ತಂಡದ ಆರಂಭ ಚೆನ್ನಾಗಿರಲ್ಲಿಲ್ಲ. 5.3 ಓವರ್‌ಗಳಲ್ಲಿ 21 ರನ್ ಗಳಿಸುವ ಷ್ಟರಲ್ಲಿ ಆರಂಭಿಕ ಆಟಗಾರ್ತಿ ಲಿಝೆಲೇ ಲೀ (7) ಅವರನ್ನು ಕಳೆದುಕೊಂಡಿತ್ತು. ಅವರು ಅನ್ಯ ಶ್ರುಬ್ಸೋಲೆ ಎಸೆತದಲ್ಲಿ ಲೀ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

  ಲೀ ಜಾಗಕ್ಕೆ ಆಗಮಿಸಿದ ತ್ರೀಶಾ ಚೆಟ್ಟಿ (15) ಅವರು ನ್ಯಾಟ್ ಸ್ಕೀವೆರ್‌ಗೆ ವಿಕೆಟ್ ಒಪ್ಪಿಸಿದರು. ಮೂರನೆ ವಿಕೆಟ್‌ಗೆ ವೋರ್ಲ್ವಾಡ್ತ್ ಮತ್ತು ಮಿಗ್ನಾನ್ ಡು ಪ್ರೀಝ್ 77 ರನ್‌ಗಳ ಜೊತೆಯಾಟ ನೀಡಿದರು. 32ನೆ ಓವರ್‌ನ ಎರಡನೆ ಎಸೆತದಲ್ಲಿ ಹೀದರ್ ನೈಟ್ ಅವರು ವೋರ್ಲ್ವಾಡ್ತ್‌ಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಇವರ ಜೊತೆಯಾಟ ಮುರಿದರು.

  ಯುವ ಆಟಗಾರ್ತಿ ವೋರ್ಲ್ವಾಡ್ತ್ 66 ರನ್ (100ಎ, 8ಬೌ) ಗಳಿಸಿ ನೈಟ್‌ಗೆ ವಿಕೆಟ್ ಒಪ್ಪಿಸಿದರು. ವೋರ್ಲ್ವಾಡ್ತ್ 81 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ ಟೂರ್ನಮೆಂಟ್‌ನಲ್ಲಿ ನಾಲ್ಕನೆ ಅರ್ಧಶತಕ ಪೂರ್ಣಗೊಳಿಸಿದರು.

  ಮರಿಝಾನೆ ಕಾಪ್ (1) ರನೌಟಾದರು. ನಾಯಕಿ ವ್ಯಾನ್ ನಿಯೆರ್‌ಕೆರ್ಕ್ ಅವರು 27 ರನ್ ಗಳಿಸಿ ರನೌಟಾದರು. ಬಳಿಕ ಕ್ರೀಸ್‌ಗೆ ಆಗಮಿಸಿದ ಟೈರಾನ್ (1) ಅವರು ಇಂಗ್ಲೆಂಡ್‌ನ ಬೌಲರ್‌ಗಳ ದಾಳಿಯನ್ನು ಎದುರಿಸಲಾರದೆ ಪೆವಿಲಿಯನ್ ಸೇರಿದರು.

 ಅಂತಿಮವಾಗಿ 7ನೆ ವಿಕೆಟ್‌ಗೆ ಪ್ರೀಝ್ ಮತ್ತು ಸುನೆ ಲೂವುಸ್ ಮುರಿಯದ ಜೊತೆಯಾಟದಲ್ಲಿ 48 ರನ್ ಜಮೆ ಮಾಡಿದರು. ದಕ್ಷಿಣ ಆಫ್ರಿಕದ ಸ್ಕೋರ್ 200ರ ಗಡಿ ದಾಟಿತು.

ಪ್ರೀಝ್ ಔಟಾಗದೆ 76 ರನ್(95ಎ,5ಬೌ) ಮತ್ತು ಸುನೆ ಲೂವುಸ್ 21ರನ್ ಗಳಿಸಿ ಔಟಾಗದೆ ಉಳಿದರು.ಇಂಗ್ಲೆಂಡ್‌ನ ಬೌಲರ್‌ಗಳಾದ ಶ್ರುಬ್ಸೋಲೆ ,ಸ್ಕೀವೆರ್, ಗುನ್ ಮತ್ತು ನೈಟ್ ತಾಲ 1 ವಿಕೆಟ್ ಹಂಚಿಕೊಂಡರು.


















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News