ವನಿತೆಯರ ಐಸಿಸಿ ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಆಸ್ಟ್ರೇಲಿಯದ ಸವಾಲು
ಡರ್ಬಿ, ಜು.19: ವನಿತೆಯರ ಐಸಿಸಿ ವಿಶ್ವಕಪ್‌ನಲ್ಲಿ ಗುರುವಾರ ಇಲ್ಲಿ ನಡೆಯಲಿರುವ ಎರಡನೆ ಸೆಮಿ ಫೈನಲ್ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯದ ಸವಾಲು ಎದುರಿಸಲಿದೆ.
ಆಸ್ಟ್ರೇಲಿಯದ ವಿರುದ್ಧ ಭಾರತ ಕಳಪೆ ದಾಖಲೆ ಹೊಂದಿದ್ದು, 42 ಪಂದ್ಯಗಳ ಪೈಕಿ 34ರಲ್ಲಿ ಸೋತಿದೆ. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಆಸೀಸ್ ವಿರುದ್ಧ ಸರಣಿಸೋಲಿನಿಂದ ಹೊರಬರುವ ಗುರಿ ಹಾಕಿಕೊಂಡಿದೆ.
ಒಂದು ವೇಳೆ ಭಾರತ ಗೆಲುವು ಸಾಧಿಸಿದರೆ ಲಾರ್ಡ್ಸ್‌ನಲ್ಲಿ ಜು.23 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು ಎದುರಿಸಲಿದೆ. ಪಂದ್ಯಾವಳಿಯ ಇತಿಹಾಸದಲ್ಲಿ 2ನೆ ಬಾರಿ ಫೈನಲ್‌ಗೆ ತಲುಪಿದ ಸಾಧನೆ ಮಾಡಲಿದೆ.
2005ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಕೊನೆಯ ಬಾರಿ ಆಡಿದ್ದು, ಆ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿತ್ತು.
ಭಾರತ ಟೂರ್ನಿಯ ರೌಂಡ್‌ರಾಬಿನ್ ಸುತ್ತಿನಲ್ಲಿ ಐದರಲ್ಲಿ ಜಯ, ಎರಡರಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ 3ನೆ ಸ್ಥಾನ ಪಡೆದಿತ್ತು. 7 ಪಂದ್ಯಗಳಲ್ಲಿ ಆರರಲ್ಲಿ ಜಯಸಾಧಿಸಿದ್ದ ಆಸ್ಟ್ರೇಲಿಯ ಮೊದಲ ಸ್ಥಾನ ಪಡೆದಿತ್ತು.
ಡರ್ಬಿಯ ಕೌಂಟಿ ಮೈದಾನ ಭಾರತಕ್ಕೆ ಚಿರಪರಿಚಿತವಾಗಿದ್ದು, ಇದೇ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧದ ಪಂದ್ಯ ಸೇರಿದಂತೆ ಒಟ್ಟು ನಾಲ್ಕು ಗ್ರೂಪ್ ಪಂದ್ಯಗಳನ್ನು ಆಡಿತ್ತು. ಆಸ್ಟ್ರೇಲಿಯ ಇದೇ ಮೊದಲ ಬಾರಿ ಈ ಮೈದಾನದಲ್ಲಿ ಆಡುತ್ತಿದೆ.
ಬ್ರಿಸ್ಟಲ್‌ನಲ್ಲಿ ಕೆಲವೇ ವಾರಗಳ ಹಿಂದೆ ನಡೆದಿದ್ದ ಟೂರ್ನಿಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 8 ವಿಕೆಟ್‌ಗಳಿಂದ ಸೋತಿರುವ ಭಾರತಕ್ಕೆ ಇದೀಗ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ. ಆದರೆ, ಆಸ್ಟ್ರೇಲಿಯವನ್ನು ಮಣಿಸಬೇಕಾದರೆ ಎಲ್ಲ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ.
ನಾಯಕಿ ಮಿಥಾಲಿ ಆಸೀಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದರು. ನ್ಯೂಝಿಲೆಂಡ್ ವಿರುದ್ಧದ ನಿರ್ಣಾಯಕ ಲೀಗ್ ಪಂದ್ಯದಲ್ಲಿ ಒತ್ತಡದಲ್ಲೂ ಶತಕ ಬಾರಿಸಿದ್ದರು. ಕನ್ನಡತಿ ವೇದಾ ಕೃಷ್ಣಮೂರ್ತಿ 40 ಎಸೆತಗಳಲ್ಲಿ 70 ರನ್ ಗಳಿಸಿದ್ದರು.
ನ್ಯೂಝಿಲೆಂಡ್‌ನ್ನು ಕೇವಲ 79 ರನ್‌ಗೆ ನಿಯಂತ್ರಿಸಿದ್ದ ಭಾರತದ ಬೌಲರ್‌ಗಳು 186 ರನ್ ಗೆಲುವು ತಂದುಕೊಟ್ಟಿದ್ದರು. ಸ್ಪಿನ್ನರ್‌ಗಳು ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಮೊದಲ ಪಂದ್ಯವನ್ನಾಡಿದ್ದ ಎಡಗೈ ಸ್ಪಿನ್ನರ್, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್(5-15) ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದರು. ಆಸೀಸ್ ವಿರುದ್ಧ ಸೆಮಿ ಫೈನಲ್‌ನಲ್ಲೂ ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದು, ನಾಯಕಿ ಮಿಥಾಲಿರಾಜ್ ವಿಜಯಪುರದ ಬೌಲರ್ ಗಾಯಕ್ವಾಡ್‌ಗೆ ಮತ್ತೊಂದು ಅವಕಾಶ ನೀಡುವುದು ಖಚಿತವಾಗಿದೆ.
ಪಂದ್ಯದ ಸಮಯ: ಮಧ್ಯಾಹ್ನ 3:00