ಐಸಿಸಿ ರ‍್ಯಾಂಕಿಂಗ್‌: 3ನೆ ಸ್ಥಾನಕ್ಕೆ ಕುಸಿದ ಆರ್.ಅಶ್ವಿನ್

Update: 2017-07-19 18:05 GMT

ದುಬೈ, ಜು.19: ಐಸಿಸಿ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಭಾರತದ ಸ್ಪಿನ್ನರ್ ರವೀಂದ್ರ ಜಡೇಜ ಮೊದಲ ಸ್ಥಾನ ಕಾಯ್ದುಕೊಂಡರೆ, ರವಿಚಂದ್ರನ್ ಅಶ್ವಿನ್ ಮೂರನೆ ಸ್ಥಾನಕ್ಕೆ ಕುಸಿದಿದ್ದಾರೆ.

ಝಿಂಬಾಬ್ವೆ ವಿರುದ್ಧ ಕೊಲಂಬೊದಲ್ಲಿ ಮಂಗಳವಾರ ಕೊನೆಗೊಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಕಬಳಿಸಿದ್ದ ಶ್ರೀಲಂಕಾದ ಸ್ಪಿನ್ನರ್ ರಂಗನ ಹೆರಾತ್ ದ್ವಿತೀಯ ಸ್ಥಾನಕ್ಕೇರಿದ್ದಾರೆ.

39ರ ಪ್ರಾಯದ ಹೆರಾತ್ ಝಿಂಬಾಬ್ವೆ ವಿರುದ್ಧ ಟೆಸ್ಟ್‌ನಲ್ಲಿ 249 ರನ್ ನೀಡಿ 11 ವಿಕೆಟ್‌ಗಳನ್ನು ಕಬಳಿಸಿದ್ದರು. ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ಹಾಗೂ ಆಸ್ಟ್ರೇಲಿಯದ ಜೊಶ್ ಹೇಝಲ್‌ವುಡ್‌ರೊಂದಿಗೆ ನಾಲ್ಕನೆ ಸ್ಥಾನ ಹಂಚಿಕೊಂಡಿದ್ದಾರೆ.

ಕೊಲಂಬೊ ಟೆಸ್ಟ್‌ನಲ್ಲಿ ಒಟ್ಟು 9 ವಿಕೆಟ್‌ಗಳನ್ನು ಉರುಳಿಸಿದ್ದ ಝಿಂಬಾಬ್ವೆ ನಾಯಕ ಹಾಗೂ ಎಡಗೈ ಸ್ಪಿನ್ನರ್ ಗ್ರೆಮ್ ಕ್ರಿಮರ್ 20 ಸ್ಥಾನ ಪಡೆದು ಜೀವನಶ್ರೇಷ್ಠ 53ನೆ ಸ್ಥಾನಕ್ಕೇರಿದ್ದಾರೆ.

 ಐಸಿಸಿ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ ಆರು ಸ್ಥಾನ ಮೇಲಕ್ಕೇರಿ 7ನೆ ಸ್ಥಾನ ತಲುಪಿದ್ದಾರೆ. ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದ್ದ ಝಿಂಬಾಬ್ವೆ ಬ್ಯಾಟ್ಸ್‌ಮನ್ ಕ್ರೆಗ್ ಎರ್ವಿನ್ ಹಾಗೂ ಸಿಕಂದರ್‌ರಝಾ ಕ್ರಮವಾಗಿ 40 ಹಾಗೂ 48ನೆ ಸ್ಥಾನಕ್ಕೇರಿ ಜೀವನ ಶ್ರೇಷ್ಠ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News