ಎಂಸಿಸಿ ನಿಯಮ ಪಾಲನೆಗೆ ಬ್ಯಾಟ್ ಬದಲಿಸಲಿರುವ ಎಂಎಸ್ ಧೋನಿ

Update: 2017-07-19 18:10 GMT

ಹೊಸದಿಲ್ಲಿ, ಜು.19: ಬ್ಯಾಟ್ಸ್‌ಮನ್‌ಗಳು ಬಳಸುವ ಬ್ಯಾಟ್‌ನ ದಪ್ಪದ ಭಾಗ 40 ಮಿಲಿಮೀಟರ್‌ಗೆ ಸೀಮಿತವಾಗಿರಬೇಕು ಎಂದು ಮ್ಯಾರಿಲ್ಬೊನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಈ ವರ್ಷದ ಮಾರ್ಚ್‌ನಲ್ಲಿ ಹೊಸ ಮಾರ್ಗದರ್ಶನ ನೀಡಿರುವ ಹಿನ್ನೆಲೆಯಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಸಹಿತ ವಿಶ್ವದ ಹಲವು ಬಿಗ್ ಹಿಟ್ಟರ್ ಬ್ಯಾಟ್ಸ್‌ಮನ್‌ಗಳು ಹೊಸ ಬ್ಯಾಟ್‌ನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.

ಅಕ್ಟೋಬರ್ 1 ರಿಂದ ಈ ನಿಯಮ ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಬಿಗ್ ಹಿಟ್ಟರ್‌ಗಳಾದ ಡೇವಿಡ್ ವಾರ್ನರ್, ಕ್ರಿಸ್ ಗೇಲ್, ಕೀರೊನ್ ಪೊಲಾರ್ಡ್ ಹಾಗೂ ಎಂಎಸ್ ಧೋನಿ ಹೊಸ ಬ್ಯಾಟ್‌ನೊಂದಿಗೆ ಎದುರಾಳಿ ಬೌಲರ್‌ಗಳನ್ನು ಎದುರಿಸಬೇಕಾಗಿದೆ.

ಆಸ್ಟ್ರೇಲಿಯದ ವಾರ್ನರ್‌ನಿಂದ ತೊಡಗಿ ವಿಂಡೀಸ್‌ನ ಗೇಲ್, ಪೊಲಾರ್ಡ್ ತನಕ ಎಲ್ಲ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳನ್ನು ಚೆನ್ನಾಗಿ ದಂಡಿಸುವ ಉದ್ದೇಶದಿಂದ 50 ಮಿಲಿಮೀಟರ್ ದಪ್ಪದಭಾಗದ ಬ್ಯಾಟ್‌ನಲ್ಲೇ ಬ್ಯಾಟಿಂಗ್ ಮಾಡುತ್ತಾರೆ. ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ಧೋನಿ ಮಾತ್ರ 45ಎಂಎಂನಷ್ಟಿರುವ ಬ್ಯಾಟ್‌ಗಳನ್ನು ಬಳಸುತ್ತಾರೆ.

ಭಾರತದ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್, ಆಸ್ಟ್ರೇಲಿಯದ ಸ್ಟೀವ್‌ವಾ ಹಾಗೂ ಇಂಗ್ಲೆಂಡ್‌ನ ಜೋ ರೂಟ್ 40ಮಿಲಿಮೀಟರ್‌ಗಿಂತ ಕಡಿಮೆ ದಪ್ಪದ ಬ್ಯಾಟ್ ಬಳಸುತ್ತಿರುವ ಕಾರಣ ಹೊಸ ಬ್ಯಾಟ್ ಬಳಸಬೇಕಾದ ಅಗತ್ಯವಿಲ್ಲ.
 ಭಾರತ ತಂಡದಲ್ಲಿ ಕೆ.ಎಲ್ ರಾಹುಲ್, ಶಿಖರ್ ಧವನ್, ಚೇತೇಶ್ವರ ಪೂಜಾರ ಹಾಗೂ ರಿಷಬ್ ಪಂತ್ ಕೊಹ್ಲಿ ಬಳಸುವ ಬ್ಯಾಟ್‌ನಲ್ಲೇ ಆಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News