ಡೈಮಂಡ್ ಲೀಗ್‌ಗೆ ನೀರಜ್ ಚೋಪ್ರಾ

Update: 2017-07-19 18:14 GMT

ಹೊಸದಿಲ್ಲಿ, ಜು.19: ಭಾರತದ ಅಗ್ರಮಾನ್ಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮೊನಾಕೊದಲ್ಲಿ ಶುಕ್ರವಾರ ಆರಂಭವಾಗಲಿರುವ ಡೈಮಂಡ್ ಲೀಗ್ ಕೂಟದಲ್ಲಿ ಭಾಗವಹಿಸಲಿದ್ದಾರೆ. ಎರಡನೆ ಬಾರಿ ಈ ಕೂಟದಲ್ಲಿ ಭಾಗವಹಿಸುತ್ತಿರುವ ಚೋಪ್ರಾ ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತಯಾರಿ ನಡೆಸಲಿದ್ದಾರೆ.

ಜು.2 ರಂದು ಪ್ಯಾರಿಸ್‌ನಲ್ಲಿ ನಡೆದಿದ್ದ ಡೈಮಂಡ್ ಲೀಗ್ ಕೂಟದಲ್ಲಿ 85.63 ಮೀ. ದೂರ ಜಾವೆಲಿನ್ ಎಸೆದಿದ್ದ ಚೋಪ್ರಾ ಐದನೆ ಸ್ಥಾನ ಪಡೆದಿದ್ದರು. ಇತ್ತೀಚೆಗೆ ಭುವನೇಶ್ವರದಲ್ಲಿ ಕೊನೆಗೊಂಡಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು.

ಜೂನ್‌ನಲ್ಲಿ ಪಟಿಯಾಲದಲ್ಲಿ ನಡೆದಿದ್ದ ಫೆಡರೇಶನ್ ಕಪ್‌ನಲ್ಲಿ 85.63 ಮೀ.ದೂರ ಜಾವೆಲಿನ್ ಎಸೆದಿದ್ದ ಚೋಪ್ರಾ ಚಿನ್ನದ ಪದಕ ಜಯಿಸಿದ್ದರು. ಈ ಸಾಧನೆಯ ಮೂಲಕ ಐಎಎಎಫ್ ರ್ಯಾಂಕಿಂಗ್‌ನಲ್ಲಿ 12ನೆ ಸ್ಥಾನ ತಲುಪಿದ್ದರು.

ಕಳೆದ ವರ್ಷ ಪೊಲೆಂಡ್‌ನಲ್ಲಿ 86.48 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದ ಚೋಪ್ರಾ ವಿಶ್ವದ ಜೂನಿಯರ್ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು.
   ಮೊನಾಕೊದಲ್ಲಿ ನಡೆಯಲಿರುವ ಲೀಗ್ ಕೂಟದಲ್ಲಿ ಜರ್ಮನಿಯ ಜೊಹಾನ್ಸ್ ವೆಟ್ಟೆರ್, ಥಾಮಸ್ ರೊಹ್ಲೆರ್ ಹಾಗೂ ಸ್ವಿಸ್‌ನ ಲುಸೆರ್ನ್ ಸಹಿತ ಹಲವು ಪ್ರಮುಖ ಅಥ್ಲೀಟ್‌ಗಳೊಂದಿಗೆ ಸ್ಪರ್ಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News