ಚೆನ್ನೈ ಓಪನ್ ಪುಣೆಗೆ ಸ್ಥಳಾಂತರ

Update: 2017-07-20 18:19 GMT

ಮುಂಬೈ, ಜು.20: ಭಾರತದ ಅತ್ಯಂತ ಪ್ರತಿಷ್ಠಿತ, ಏಕೈಕ ಎಟಿಪಿ ಟೂರ್ನಮೆಂಟ್ ಚೆನ್ನೈ ಓಪನ್ ಮುಂದಿನ ವರ್ಷದಿಂದ ಪುಣೆಯಲ್ಲಿ ನಡೆಯಲಿದ್ದು, ಈ ಟೂರ್ನಿಗೆ ‘ಮಹಾರಾಷ್ಟ್ರ ಓಪನ್’ ಎಂದು ಹೆಸರಿಡಲಾಗಿದೆ. ಟೂರ್ನಮೆಂಟ್ ಹಕ್ಕು ಹೊಂದಿರುವ ಐಎಂಜಿ -ರಿಲಯನ್ಸ್, ಮಹಾರಾಷ್ಟ್ರ ಸರಕಾರ ಹಾಗೂ ಮಹಾರಾಷ್ಟ್ರ ರಾಜ್ಯ ಲಾನ್ ಟೆನಿಸ್ ಸಂಸ್ಥೆ(ಎಂಎಸ್‌ಎಲ್‌ಟಿಎ) ಗುರುವಾರ ಜಂಟಿ ಹೇಳಿಕೆಯಲ್ಲಿ ಈ ವಿಷಯ ತಿಳಿಸಿವೆ.

ಚೆನ್ನೈ ಓಪನ್ ಕಳೆದ 21 ವರ್ಷಗಳಿಂದ ಚೆನ್ನೈನಲ್ಲಿ ಜನವರಿ ತಿಂಗಳಲ್ಲಿ ನಡೆಯುತ್ತಾ ಬಂದಿದ್ದು, ಈ ಟೂರ್ನಿಯು ಆಸ್ಟ್ರೇಲಿಯನ್ ಓಪನ್‌ಗೆ ಪೂರ್ವ ತಯಾರಿಯಾಗಿತ್ತು. ‘‘ವಿಶ್ವ ದರ್ಜೆಯ ಎಟಿಪಿ ಟೂರ್ನಮೆಂಟ್‌ನ್ನು ನಮ್ಮ ರಾಜ್ಯಕ್ಕೆ ಸ್ವಾಗತಿಸುತ್ತಿದ್ದೇವೆ. ಮಹಾರಾಷ್ಟ್ರ ಓಪನ್ ಆಯೋಜಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಪ್ರತಿ ವರ್ಷ ಪ್ರಮುಖ ಆಟಗಾರರು ಆಡುವ ಮೂಲಕ ಈ ಟೂರ್ನಿಯು ಅತ್ಯಂತ ಯಶಸ್ವಿಯಾಗುವ ವಿಶ್ವಾಸ ನನಗಿದೆ’’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

 ಚೆನ್ನೈ ಓಪನ್‌ನ ಅಭೂತಪೂರ್ವ ಯಶಸ್ಸಿಗೆ ಕಾರಣರಾಗಿರುವ ತಮಿಳುನಾಡಿನ ಟೆನಿಸ್ ಅಭಿಮಾನಿಗಳು, ಅಲ್ಲಿನ ಸರಕಾರ,ಟೆನಿಸ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಲು ಬಯಸುವೆ. ನಾವು ಪುಣೆ ಹಾಗೂ ಮಹಾರಾಷ್ಟ್ರ ಮಾತ್ರವಲ್ಲ ದೇಶದ ಪ್ರತಿಭಾಗದಲ್ಲೂ ಟೆನಿಸ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸುತ್ತಿರುವುದಾಗಿ ಐಎಂಜಿ ರಿಲಯನ್ಸ್ ವಕ್ತಾರರು ತಿಳಿಸಿದ್ದಾರೆ.

 ಭಾರತದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಚೆನ್ನೈ ಓಪನ್‌ನ ಮೂಲಕವೇ ಪ್ರಬಲ ಡಬಲ್ಸ್ ಆಟಗಾರರಾಗಿ ಬೆಳೆದಿದ್ದರು. ಸ್ವಿಸ್‌ನ ವಾವ್ರಿಂಕ ಹಾಗೂ ಮರಿನ್ ಸಿಲಿಕ್ ಎಟಿಪಿ ಇಲೈಟ್ ಟಾಪ್-5 ಪಟ್ಟಿಗೆ ಸೇರುವ ಮೊದಲು ಚೆನ್ನೈ ಓಪನ್‌ನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದರು. ಸ್ಪೇನ್‌ನ ಸೂಪರ್‌ಸ್ಟಾರ್ ರಫೆಲ್ ನಡಾಲ್ ಕೂಡ ಈ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

ಟೂರ್ನಮೆಂಟ್‌ನಲ್ಲಿ ಸೋಮ್‌ದೇವ್ ದೇವ್‌ವರ್ಮನ್, ಯೂಕಿ ಭಾಂಬ್ರಿ, ಸಾಕೇತ್ ಮೈನೇನಿ ಹಾಗೂ ರಾಮ್‌ಕುಮಾರ್ ರಾಮನಾಥನ್ ಸ್ಥಳೀಯ ಫೇವರಿಟ್ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಈ ವರ್ಷದ ಚೆನ್ನೈ ಓಪನ್‌ನಲ್ಲಿ ಸ್ಪೇನ್‌ನ ರೊಬರ್ಟೊ ಬೌಟಿಸ್ಟಾ-ಅಗುಟ್ ಸಿಂಗಲ್ಸ್ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ರೋಹನ್ ಬೋಪಣ್ಣ-ಜೀವನ್ ಜೋಡಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News