ಕೊಲಂಬೊ ತಲುಪಿದ ಭಾರತ ತಂಡ

Update: 2017-07-20 18:30 GMT

ಕೊಲಂಬೊ, ಜು.20: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡಲು ಹೊರಟ ಟೀಮ್ ಇಂಡಿಯಾ ಕೊಲಂಬೊ ತಲುಪಿದ್ದು, ಶುಕ್ರವಾರ ಮೊರಟುವಾದಲ್ಲಿ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡುವುದರ ಮೂಲಕ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ಗೆ ತಯಾರಿ ನಡೆಸಲಿದೆ.

ಶ್ರೀಲಂಕಾ ತಲುಪಿದ ತಕ್ಷಣ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಮತ್ತು ಲಂಕಾದ ಸೀಮಿತ ಓವರ್‌ಗಳ ತಂಡದ ನಾಯಕ ಉಪುಲ್ ತರಂಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲಂಕಾದ ಟೆಸ್ಟ್ ತಂಡದ ನಾಯಕ ದಿನೇಶ್ ಚಾಂಡಿಮಾಲ್ ಅನುಪಸ್ಥಿತಿಯಲ್ಲಿ ಉಪುಲ್ ತರಂಗ ಸುದ್ದಿಗಾರರೊಂದಿಗೆ ಮಾತನಾಡಿದರು.

2015ರ ಲಂಕಾ ಸರಣಿಯಲ್ಲಿ ಮೊದಲ ಟೆಸ್ಟ್‌ನ್ನು ಭಾರತ ಕಳೆದುಕೊಂಡಿತ್ತು. ಬಳಿಕ ತಿರುಗೇಟು ನೀಡಿದ ಟೀಮ್ ಇಂಡಿಯಾ ಎರಡು ಟೆಸ್ಟ್‌ಗಳಲ್ಲಿ ಜಯ ಗಳಿಸಿ ಟೂರ್ನಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತ್ತು.ಗಾಲೆಯಲ್ಲಿ ಮೊದಲ ಪಂದ್ಯದಲ್ಲಿ ಸೋತ ಬಳಿಕ ಭಾರತ ಸಂಘಟಿತ ಹೋರಾಟದ ಮೂಲಕ ಗೆಲುವು ದಾಖಲಿಸಿತ್ತು ಎಂದು ನಾಯಕ ಕೊಹ್ಲಿ ಹೇಳಿದ್ದಾರೆ.

 ‘‘ಟೆಸ್ಟ್ ಸರಣಿಗೆ ಸಾಕಷ್ಟು ತಯಾರಿಯೊಂದಿಗೆ ಟೀಮ್ ಇಂಡಿಯಾ ಆಗಮಿಸಿದೆ. ತಂಡದ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡಿದ್ದಾರೆ. ಮುಂದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ’’ಎಂದು ಕೊಹ್ಲಿ ಹೇಳಿದರು.

ನೂತನ ಕೋಚ್ ರವಿ ಶಾಸ್ತ್ರಿ ಹಿಂದಿನ ಪ್ರವಾಸ ಸರಣಿಯ ನೆನಪುಗಳನ್ನು ಸುದ್ದಿಗಾರರ ಮುಂದೆ ತೆರೆದಿಟ್ಟರು.
  ‘‘ ನಾನು ಅಂಡರ್ -19 ತಂಡದಲ್ಲಿ ಮೊದಲ ಬಾರಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದೆ. ಆಗ ನನಗೆ 18ರ ಹರೆಯ. 1992ರಲ್ಲಿ ವೀಕ್ಷಕ ವಿವರಣೆಗಾರನಾಗಿ ಮತ್ತು ಇದೀಗ ಕೋಚ್ ಆಗಿ ಮೊದಲ ಬಾರಿ ಶ್ರೀಲಂಕಾಕ್ಕೆ ಕಾಲಿರಿಸಿದ್ದೇನೆ. ಶ್ರೀಲಂಕಾ ತವರಿನಲ್ಲಿ ಬಲಿಷ್ಠ ತಂಡವಾಗಿದೆ. ನಾವು ನಮಗೆ ದೊರಕಿರುವ ನಂ.1 ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸಲಿದ್ದೇವೆ’’ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News