ಭಾರತದ ರಾಷ್ಟ್ರಪತಿಗಳಿಗೆ ಸಿಗುವ ಸೌಲಭ್ಯಗಳೇನೇನು ಎನ್ನುವುದು ನಿಮಗೆ ಗೊತ್ತೇ?

Update: 2017-07-21 11:59 GMT

ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರು ಭಾರತದ 14ನೆಯ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಪ್ರಣವ ಮುಖರ್ಜಿಯವರ ಉತ್ತರಾಧಿಕಾರಿಯಾಗಿ ಮುಂದಿನ ಐದು ವರ್ಷಗಳ ಕಾಲ ರಾಷ್ಟ್ರಪತಿ ಭವನದಲ್ಲಿ ವಾಸವಾಗಲಿರುವ ಅವರಿಗೆ ದೊರೆಯಲಿರುವ ಕೆಲವು ವಿಶಿಷ್ಟ ಸೌಲಭ್ಯಗಳ ವಿವರಗಳಿಲ್ಲಿವೆ.....

 ವಿಶ್ವದಲ್ಲಿಯ ರಾಷ್ಟ್ರಾಧ್ಯಕ್ಷರ ಕೆಲವೇ ವೈಭವೋಪೇತ ಅರಮನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ರಾಷ್ಟ್ರಪತಿ ಭವನದಲ್ಲಿ ಗಣನೀಯ ಸಂಖ್ಯೆಯಲ್ಲಿ ಅತ್ಯುತ್ತಮ ತಳಿಗಳ ಕುದುರೆಗಳಿದ್ದು, ಅವುಗಳಿಗಾಗಿ ಸುಸಜ್ಜಿತ ಲಾಯಗಳಿವೆ. ಆಸ್ಪತ್ರೆಗಳ ಸಮೂಹವೇ ರಾಷ್ಟ್ರಪತಿಗಳ ಸೇವೆಗಿದೆ. ಬೃಹತ್ ಗಾಲ್ಫ್ ಕೋರ್ಸ್ ಇದೆ. ಜಗತ್ಪ್ರಸಿದ್ಧ ಮೊಘಲ್ ಗಾರ್ಡನ್ ಜೊತೆಗೆ ಇತರ ನಾಲ್ಕು ಸುಂದರ ಉದ್ಯಾನವನಗಳೂ ನೂತನ ರಾಷ್ಟ್ರಪತಿಗಾಗಿ ಕಾಯುತ್ತಿವೆ.

ಕೋವಿಂದ್ ಅವರ ನೂತನ ನಿವಾಸ, ಭಾರತದ ರಾಷ್ಟ್ರಪತಿಗಳ ಅಧಿಕೃತ ವಾಸಸ್ಥಾನವಾಗಿರುವ ರಾಷ್ಟ್ರಪತಿ ಭವನವು ವಿಶ್ವದ ಅತ್ಯಂತ ಬೃಹತ್ ಅಧ್ಯಕ್ಷರ ಅರಮನೆಗಳಲ್ಲೊಂದಾಗಿದೆ. 330 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ 2,00,000 ಚದುರಡಿ ಬಿಲ್ಟಪ್ ಏರಿಯಾ ಹೊಂದಿರುವ ಈ ಭವನದಲ್ಲಿ ಬರೋಬ್ಬರಿ 340 ಕೊಠಡಿಗಳಿದ್ದು, ಈ ಪೈಕಿ 63 ಲಿವಿಂಗ್ ರೂಮ್‌ಗಳಾಗಿವೆ. ಬೃಹತ್ ಗ್ರಂಥಾಲಯದ ಜೊತೆಗೆ ಪುಸ್ತಕಗಳನ್ನು ಓದಲು ವಿಶಾಲವಾದ ಸುಸಜ್ಜಿತ ಜಾಗವನ್ನೂ ಹೊಂದಿದೆ.

  

ರಾಷ್ಟ್ರಪತಿಗಳ ಸೇವೆಗಾಗಿ ಮತ್ತು ಭವನದ ನಿರ್ವಹಣೆಗಾಗಿ 200 ಸಿಬ್ಬಂದಿಗಳಿದ್ದಾರೆ. ಭವನದ ವಾರ್ಷಿಕ ವಿದ್ಯುತ್ ಬಳಕೆಯ ಶುಲ್ಕವೇ 6.7 ಕೋ.ರೂ.ಗಳಷ್ಟಿದೆ!

ರಾಷ್ಟ್ರಪತಿ ಭವನದ ಜೊತೆಗೆ ಎರಡು ರಿಟ್ರೀಟ್ ರೆಸಾರ್ಟ್‌ಗಳೂ ಕೋವಿಂದ್ ಅವರ ಬಳಕೆಗೆ ಲಭ್ಯವಿವೆ. ಹೈದರಾಬಾದ್‌ನಲ್ಲಿರುವ ರಾಷ್ಟ್ರಪತಿ ನಿಲಯಂ ಮತ್ತು ಶಿಮ್ಲಾದಲ್ಲಿರುವ ರಿಟ್ರೀಟ್ ಬಿಲ್ಡಿಂಗ್ ಇವೆರಡೂ ಭಾರತದ ರಾಜಧಾನಿಯ ಹೊರಗೆ ರಾಷ್ಟ್ರಪತಿಗಳ ಅಧಿಕೃತ ನಿವಾಸಗಳಾಗಿವೆ.

ರಾಷ್ಟ್ರಪತಿಗಳಿಗೆ ಒದಗಿಸಲಾಗುವ ಭದ್ರತೆಯು ಅತ್ಯುನ್ನತವಾದ ವಿಆರ್6/ವಿಆರ್7 ದರ್ಜೆಯಲ್ಲಿರುತ್ತದೆ. ಮಿಲಿಟರಿ ರೈಫಲ್‌ನಿಂದ ಗುಂಡು ಹಾರಾಟ, ಹ್ಯಾಂಡ್ ಗ್ರೆನೇಡ್‌ಗಳು, ಕ್ಷಿಪಣಿ ದಾಳಿ, ಬಾಂಬ್ ಮತ್ತು ಇತರ ಸ್ಫೋಟಕಗಳು ರಾಷ್ಟ್ರಪತಿಗಳ ಭದ್ರತೆಯನ್ನು ಭೇದಿಸಲು ಅಸಮರ್ಥವಾಗಿವೆ.

ಅಂದ ಹಾಗೆ ರಾಷ್ಟ್ರಪತಿಗಳು ತಿಂಗಳಿಗೆ 1,50,000 ರೂ.ಗಳ ವೇತನ ಮತ್ತು ಇತರ ಭತ್ತೆಗಳನ್ನು ಪಡೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News