×
Ad

ಮಿಥಾಲಿ ಪಡೆಗೆ ಗೆಲುವಿನ ಇತಿಹಾಸ ಬರೆಯುವ ತವಕ

Update: 2017-07-22 23:51 IST

ಲಂಡನ್, ಜು.22: ಮಿಥಾಲಿ ರಾಜ್ ನಾಯಕತ್ವದ ಭಾರತದ ಮಹಿಳಾ ಕ್ರಿಕೆಟ್ ತಂಡ ‘ಕ್ರಿಕೆಟ್ ಕಾಶಿ’ ಖ್ಯಾತಿಯ ಲಾರ್ಡ್ಸ್‌ನಲ್ಲಿ ರವಿವಾರ ನಡೆಯಲಿರುವ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು ಎದುರಿಸಲಿದ್ದು, ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಬರೆಯುವ ಕಡೆಗೆ ನೋಡುತ್ತಿದೆ.

 ಆರು ಬಾರಿ ಚಾಂಪಿಯನ್ ಆಗಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದ್ದ ಆಸ್ಟ್ರೇಲಿಯವನ್ನು ಎರಡನೆ ಸೆಮಿಫೈನಲ್‌ನಲ್ಲಿ 36 ರನ್‌ಗಳ ಅಂತರದಲ್ಲಿ ಮಣಿಸಿ ಫೈನಲ್ ತಲುಪಿರುವ ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಇನ್ನೊಂದು ಮೆಟ್ಟಿಲು ಬಾಕಿ ಇದೆ.

      ಪುರುಷರ ವಿಶ್ವಕಪ್ ಆರಂಭ ಗೊಂಡದ್ದು 1975ರಲ್ಲಿ. ಇದಕ್ಕೂ ಎರಡು ವರ್ಷಗಳ ಮುನ್ನ ಅಂದರೆ 1973ರಲ್ಲಿ ಪ್ರಾರಂಭಗೊಂಡ ಮಹಿಳಾ ವಿಶ್ವಕಪ್ ಕ್ರಿಕೆಟ್‌ನಲ್ಲಿ ಈ ತನಕ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಪಾರಮ್ಯ ಮೆರೆದಿದ್ದವು. ನ್ಯೂಝಿಲೆಂಡ್ ತಂಡ 2000ರ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿರುವುದು ಹೊರತುಪಡಿಸಿದರೆ ಇತರ ಯಾವುದೇ ತಂಡಕ್ಕೂ ಪ್ರಶಸ್ತಿ ದೊರೆಯದಂತೆ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳು ನೋಡಿಕೊಂಡಿವೆ. ಇಂಗ್ಲೆಂಡ್‌ನ ಪುರುಷರ ತಂಡಕ್ಕೆ ಈ ತನಕ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಮಹಿಳಾ ತಂಡ ಮೂರು ಬಾರಿ ವಿಶ್ವ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಒಂದು ವೇಳೆ ಭಾರತ ಗೆದ್ದರೆ ವಿಶ್ವಕಪ್ ಮುಡಿಗೇರಿಸಿಕೊಂಡ ನಾಲ್ಕನೆ ರಾಷ್ಟ್ರವಾಗುತ್ತದೆ.

ಇಂಗ್ಲೆಂಡ್ ಏಳನೆ ಬಾರಿ ಫೈನಲ್ ಪ್ರವೇಶಿಸಿ ನಾಲ್ಕನೆ ಬಾರಿ ಪ್ರಶಸ್ತಿ ಎತ್ತಲು ಎದುರು ನೋಡುತ್ತಿದೆ. ಆದರೆ, ಭಾರತ ಎರಡನೆ ಬಾರಿ ಫೈನಲ್ ತಲುಪಿದೆ. 2005ರಲ್ಲಿ ಭಾರತ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 98 ರನ್‌ಗಳ ಅಂತರದಿಂದ ಸೋಲು ಅನುಭವಿಸಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು. .

 12 ವರ್ಷಗಳ ಬಳಿಕ ಮತ್ತೊಮ್ಮೆ ಫೈನಲ್ ಪ್ರವೇಶಿಸಿದ ಭಾರತಕ್ಕೆ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡದ ಸವಾಲು ಎದುರಾಗಿದೆ. ಇಂಗ್ಲೆಂಡ್‌ನ್ನು ಮಣಿಸುವುದು ಭಾರತಕ್ಕೆ ಕಷ್ಟವಲ್ಲ. ಲೀಗ್ ಹಂತದಲ್ಲಿ ಭಾರತ ಎದುರಿಸಿದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 35 ರನ್‌ಗಳ ಗೆಲುವು ದಾಖಲಿಸಿ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಿತ್ತು.

ಇಂಗ್ಲೆಂಡ್ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಎರಡು ವಿಕೆಟ್‌ಗಳ ಜಯ ಗಳಿಸಿ ತವರಿನಲ್ಲಿ ಪ್ರಶಸ್ತಿ ಗೆಲ್ಲುವ ಹೋರಾಟಕ್ಕೆ ಅಣಿಯಾಗಿದೆ.

1983ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಪುರುಷರ ವಿಶ್ವಕಪ್‌ನಲ್ಲಿ ವಿಶ್ವದ ಬಲಿಷ್ಠ ತಂಡವಾಗಿದ್ದ ವೆಸ್ಟ್‌ಇಂಡೀಸ್‌ಗೆ ಸೋಲುಣಿಸಿದ್ದ ಭಾರತ ಹೊಸ ಇತಿಹಾಸ ಬರೆದಿತ್ತು. ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದ ವೆಸ್ಟ್‌ಇಂಡೀಸ್‌ಗೆ ಅಂದು ಕೈ ತಪ್ಪಿದ ವಿಶ್ವಕಪ್ ಟ್ರೋಫಿ ಮತ್ತೆ ಈ ತನಕ ದೊರೆತಿಲ್ಲ. ಭಾರತ ಪ್ರಶಸ್ತಿ ಜಯಿಸಿ ವಿಶ್ವಕ್ಕೆ ತನ್ನ ಶಕ್ತಿ ಸಾಮರ್ಥ್ಯವನ್ನು ತೋರಿಸಿಕೊಟ್ಟಿತ್ತು. ಮುಂದೆ ಭಾರತ ಕ್ರಿಕೆಟ್‌ನಲ್ಲಿ ಸೂಪರ್ ಪವರ್ ರಾಷ್ಟ್ರವಾಗಿ ಬೆಳೆಯಿತು.

 ಅಂದು ಕಪಿಲ್ ದೇವ್ ಎದುರಿಸಿದ ಸವಾಲು ಇಂದು ಅದೇ ಲಾರ್ಡ್ಸ್‌ನಲ್ಲಿ ಮಿಥಾಲಿ ಪಡೆಗೆ ಎದುರಾಗಿದೆ. ಭವಿಷ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ಇನ್ನಷ್ಟು ಬೆಳೆಯಲು ಮಿಥಾಲಿ ಬಳಗ ವಿಶ್ವಕಪ್ ಗೆಲ್ಲಬೇಕಾ ಗಿದೆ.

 ಜೂಲನ್ ಗೋಸ್ವಾಮಿ ಮತ್ತು ಮಿಥಾಲಿ ರಾಜ್ 2005ರಲ್ಲಿ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ ತಂಡದಲ್ಲಿದ್ದರು. ಬಹುಶ ಅವರ ಪಾಲಿಗೆ ಇದು ಕೊನೆಯ ವಿಶ್ವಕಪ್. 34ರ ಹರೆಯದ ಇಬ್ಬರು ಆಟಗಾರ್ತಿಯರು ಮುಂದಿನ ವಿಶ್ವಕಪ್ ವೇಳೆಗೆ ತಂಡದಲ್ಲಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ‘‘ ನನಗೆ ಮತ್ತು ಜೂಲನ್ ಪಾಲಿಗೆ ಇದೊಂದು ಸ್ಮರಣೀಯ ಫೈನಲ್ ಆಗಿದೆ’’ ಎಂದು ಭಾರತ ತಂಡದ ನಾಯಕಿ ಮಿಥಾಲಿ ಹೇಳಿದ್ದಾರೆ.

 ‘‘ ನಾವೆಲ್ಲರೂ ವಿಶ್ವಕಪ್ ಫೈನಲ್‌ನಲ್ಲಿ ಆಡುವ ಆ ಕ್ಷಣಕ್ಕಾಗಿ ಕಾಯುತ್ತಿದ್ದೇವೆ. ಫೈನಲ್ ಹಾದಿ ಕಠಿಣವಾಗಿತ್ತು. ಆದರೆ ಪರಿಸ್ಥಿತಿ ಗೆ ಹೊಂದಿಕೊಂಡು ತಂಡದ ಆಟಗಾರ್ತಿಯರು ಆಡಿದ್ದರು. ಭಾರತವನ್ನು ಫೈನಲ್‌ಗೆ ತಲುಪಿಸಲು ನೆರವಾದರು’’ ಎಂದು ಮಿಥಾಲಿ ಅಭಿಪ್ರಾಯಪಟ್ಟಿದ್ದಾರೆ.

ಟೂರ್ನಿಯಲ್ಲಿ ಗರಿಷ್ಠ ರನ್ ದಾಖಲಿಸಿದ ಆಟಗಾರ್ತಿಯರ ಪೈಕಿ ಮಿಥಾಲಿ (392) ಎರಡನೆ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ಎಲಿಸಾ ಪೆರ್ರಿ (404) ಅಗ್ರಸ್ಥಾನ ಗಳಿಸಿದ್ದಾರೆ.

  ಭಾರತದ ಅಗ್ರ ಸರದಿಯ ಆಟಗಾರ್ತಿ ಸ್ಮತಿ ಮಂಧಾನ ಮೊದಲ ಪಂದ್ಯಗಳಲ್ಲಿ ಚೆನ್ನಾಗಿ ಆಡಿದ್ದರು. ಇಂಗ್ಲೆಂಡ್ ವಿರುದ್ಧ 90 ರನ್ ಮತ್ತು ವೆಸ್ಟ್‌ಇಂಡೀಸ್ ವಿರುದ್ಧ ಔಟಾಗದೆ 106 ರನ್ ಗಳಿಸಿದ್ದರು. ಬಳಿಕ ಸತತ ಆರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಮಿಥಾಲಿ ಮಧ್ಯಮ ಸರದಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.ನ್ಯೂಝಿಲೆಂಡ್ ವಿರುದ್ಧ 106 ರನ್, ಕನ್ನಡತಿ ವೇದಾ ಕೃಷ್ಣಮೂರ್ತಿ 70 ರನ್ ಮತ್ತು ಹರ್ಮನ್‌ಪ್ರೀತ್ ಕೌರ್ 60 ರನ್‌ಗಳ ಕೊಡುಗೆ ನೀಡಿ ಭಾರತವನ್ನು ಸೆಮಿಫೈನಲ್

 ಗೆ ತಲುಪಿಸಿದ್ದರು. ಸೆಮಿಫೈನಲ್‌ನಲ್ಲಿ ಕೌರ್ (171) ದೊಡ್ಡ ಕೊಡುಗೆ ನೀಡಿದ್ದರು. ದಕ್ಷಿಣ ಆಫ್ರಿಕ ವಿರುದ್ಧ ಇಂಗ್ಲೆಂಡ್ 2 ವಿಕೆಟ್‌ಗಳ ರೋಚಕ ಜಯ ಗಳಿಸಿ ಫೈನಲ್ ತಲುಪಿತ್ತು. ವಿಕೆಟ್ ಕೀಪರ್ ಸಾರಾ ಟೇಲರ್ ಮತ್ತು ನಟಾಲಿ ಸ್ಕೀವೆರ್ ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ನ ಬೆನ್ನಲುಬು ಅಗಿದ್ದಾರೆ. ನಾಯಕಿ ಹೀದರ್ ನೈಟ್ ಫೈನಲ್‌ನಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.ಇಂಗ್ಲೆಂಡ್ ತಂಡ ಸೆಮಿಫೈನಲ್‌ನಲ್ಲಿ ಆಡಿರುವ ಆಟಗಾರ್ತಿಯರನ್ನೇ ಫೈನಲ್‌ನಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ.

ಭಾರತ: ಮಿಥಾಲಿ ರಾಜ್ (ನಾಯಕಿ), ಪೂನಮ್ ರಾವತ್, ಸ್ಮತಿ ಮಂಧಾನ, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮ, ವೇದಾ ಕೃಷ್ಣಮೂರ್ತಿ, ಶಿಖಾ ಪಾಂಡೆ, ಸುಷ್ಮಾ ವರ್ಮ (ವಿಕೆಟ್ ಕೀಪರ್), ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್‌ವಾಡ್, ಪೂನಮ್ ಯಾದವ್/ಏಕ್ತಾ ಬಿಷ್ಟ್.

ಇಂಗ್ಲೆಂಡ್:  ಹೀದರ್ ನೈಟ್(ನಾಯಕಿ), ಲಾರೆನ್ ವಿನ್‌ಫೀಲ್ಡ್, ಟಾಮಿ ಬೇವೌಂಟ್, ಸಾರಾ ಟೇಲರ್ (ವಿಕೆಟ್ ಕೀಪರ್), ಸಥಾಲಿಯಾ ಸ್ಕೀವರ್, ಫ್ರಾನ್ ವಿಲ್ಸನ್, ಕ್ಯಾಥರಿನ್ ಬ್ರಂಟ್, ಜೆನ್ನಿ ಗನ್, ಲಾರಾ ಮಾರ್ಷ್,ಅನ್ಯ ಶ್ರುಬೊಸ್ಲೆ, ಅಲೆಕ್ಸ್ ಹಾರ್ಟ್ಲಿ .

►ಪಿಚ್ ಸ್ಥಿತಿ/ವಾತಾವರಣ: ರನ್ ಹೊಳೆ ಹರಿಯುವ ನಿರೀಕ್ಷೆ ಇದೆ. ಇಂಗ್ಲೆಂಡ್‌ಗೆ ತವರಿನ ವಾತಾವರಣ. ಅವರ ಆಟಕ್ಕೆ ಪೂರಕ ಪಿಚ್. ಭಾರತಕ್ಕೆ ಕಠಿಣ ಸವಾಲು ನಿರೀಕ್ಷಿಸಲಾಗಿದೆ.

ಐತಿಹಾಸಿಕ ಲಾರ್ಡ್ಸ್‌ನಲ್ಲಿ ನಡೆಯುವ ವಿಶ್ವಕಪ್ ಫೈನಲ್ ಪಂದ್ಯ ಜಯಿಸುವ ಯೋಜನೆ ಹಾಕಿಕೊಂಡಿದ್ದೇವೆ. ಕಳೆದ 18 ತಿಂಗಳಿಂದ ನಮ್ಮ ಪ್ರಯತ್ನ ಸಾಗುತ್ತಿದ್ದು, ಇದೀಗ ನಾವು ಫೈನಲ್ ಹಂತ ತಲುಪಿದ್ದೇವೆ.

ಹೀದರ್ ನೈಟ್, ಇಂಗ್ಲೆಂಡ್ ನಾಯಕಿ.

ಸಹ ಆಟ ಗಾರ್ತಿಯರು ನನಗೆ ವಿಶ್ವಕಪ್ ಫೈನಲ್‌ನಲ್ಲಿ ಮತ್ತೊಮ್ಮೆ ಆಡುವ ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ.

ಮಿಥಾಲಿ ರಾಜ್ , ಭಾರತದ ನಾಯಕಿ

26, 500 ಅಭಿಮಾನಿಗಳು ಫೈನಲ್ ಪಂದ್ಯ ವೀಕ್ಷಣೆಗೆ ಆಗಮಿಸುವುದನ್ನು ನಿರೀಕ್ಷಿಸಲಾಗಿದೆ.

►ಮಿಥಾಲಿ ರಾಜ್ ಎರಡು ಬಾರಿ ತಂಡವನ್ನು ವಿಶ್ವಕಪ್‌ನಲ್ಲಿ ಮುನ್ನಡೆಸಿದ ನಾಯಕಿ. 2005ರಲ್ಲಿ ಅವರು ನಾಯಕಿಯಾಗಿ ತಂಡವನ್ನು ಫೈನಲ್ ತಲುಪಿಸಿದ್ದರು. 2017 ಮತ್ತೆ ತಂಡವನ್ನು ಫೈನಲ್‌ನಲ್ಲಿ ಮುನ್ನಡೆಸುವ ಮೂಲಕ ಮಹಿಳಾ ಮತ್ತು ಪುರುಷ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ನಾಯಕಿ ಎನಿಸಿಕೊಳ್ಳಲಿದ್ದಾರೆ.

►ಭಾರತ ಮತ್ತು ಇಂಗ್ಲೆಂಡ್ ಲಾರ್ಡ್ಸ್‌ನಲ್ಲಿ 1-1 ಗೆಲುವಿನ ದಾಖಲೆ ಹೊಂದಿವೆೆ.

►19ರ ಹರೆಯದ ದೀಪ್ತಿ ಶರ್ಮ ಮಹಿಳಾ ವಿಶ್ವಕಪ್‌ನಲ್ಲಿ 200 ರನ್ ಮತ್ತು 10 ವಿಕೆಟ್‌ಗಳನ್ನು ಪಡೆದಿರುವ ಯುವ ಆಟಗಾರ್ತಿ. ಇಂಗ್ಲೆಂಡ್‌ನ ಮೂವರು ಆಟಗಾರ್ತಿಯರು 350ಕ್ಕ್ಕೂ ಅಧಿಕ ರನ್ ದಾಖಲಿಸಿದ್ದಾರೆ. ಅವರೆಂದರೆ ಟಾಮಿ ಬೇವೌಂಟ್ (387), ಹೀದರ್ ನೈಟ್(363), ಸಾರಾ ಟೇಲರ್(351). ಭಾರತದ ನಾಯಕಿ ಮಿಥಾಲಿ ರಾಜ್(392) ಟೂರ್ನಿಯಲ್ಲಿ ಎರಡನೆ ಗರಿಷ್ಠ ಸ್ಕೋರರ್.

ಇಂಗ್ಲೆಂಡ್ ಫೈನಲ್ ಹಾದಿ

►ಭಾರತ ವಿರುದ್ಧ 35 ರನ್ ಸೋಲು ಪಾಕಿಸ್ತಾನ ವಿರುದ್ಧ 107 ರನ್ ಜಯ(ಡಿ/ಎಲ್ ನಿಯಮ)
►ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ಜಯ
►ದಕ್ಷಿಣ ಆಫ್ರಿಕ ವಿರುದ್ಧ 68 ರನ್ ಜಯ
►ಆಸ್ಟ್ರೇಲಿಯ ವಿರುದ್ಧ 3 ರನ್ ಗೆಲುವು
►ನ್ಯೂಝಿಲೆಂಡ್ ವಿರುದ್ಧ 75 ರನ್ ಜಯ
►ವೆಸ್ಟ್‌ಇಂಡೀಸ್ ವಿರುದ್ಧ 92 ರನ್ ಗೆಲುವು
►ಸೆಮಿಫೈನಲ್: ದಕ್ಷಿಣ ಆಫ್ರಿಕ ವಿರುದ್ಧ 2 ವಿಕೆಟ್‌ಗಳ ಜಯ

ಭಾರತದ ಫೈನಲ್ ಹಾದಿ

►ಇಂಗ್ಲೆಂಡ್ ವಿರುದ್ಧ 35 ರನ್ ಜಯ
►ವೆಸ್ಟ್‌ಇಂಡೀಸ್ ವಿರುದ್ಧ 7 ವಿಕೆಟ್‌ಗಳ ಜಯ
►ಪಾಕಿಸ್ತಾನ ವಿರುದ್ಧ 95 ರನ್ ಗೆಲುವು
►ಶ್ರೀಲಂಕಾ ವಿರುದ್ಧ 16 ರನ್ ಜಯ
►ದಕ್ಷಿಣ ಆಫ್ರಿಕ ವಿರುದ್ಧ 115 ರನ್ ಸೋಲು
►ಆಸ್ಟ್ರೇಲಿಯ ವಿರುದ್ಧ 8 ವಿಕೆಟ್‌ಗಳ ಸೋಲು
►ನ್ಯೂಝಿಲೆಂಡ್ ವಿರುದ್ಧ 186 ರನ್ ಜಯ
►ಸೆಮಿಫೈನಲ್: ಆಸ್ಟ್ರೇಲಿಯ ವಿರುದ್ಧ 36 ರನ್ ಜಯ

ಪಂದ್ಯದ ಸಮಯ ಮಧ್ಯಾಹ್ನ 3.00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News