×
Ad

ನಿಮಗೆ ಕೆಲಸ ನೀಡಲು ನೀವು ಭಜ್ಜಿ ಅಲ್ಲ ....!

Update: 2017-07-23 17:02 IST

ಚಂಡಿಗಡ, ಜು.23: ಆಸ್ಟ್ರೇಲಿಯದ ವಿರುದ್ಧ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಔಟಾಗದೆ 171 ರನ್ ಸಿಡಿಸಿ ಗಮನ ಸೆಳೆದ ಭಾರತದ ಆಟಗಾರ್ತಿ ಹರ್ಮನ್‌ಪ್ರೀತ್ ಆರು ವರ್ಷಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದಾಗ ಪೊಲೀಸ್ ಮುಖ್ಯಸ್ಥರು ಅವರನ್ನು ಕೆಲಸ ನೀಡದೆ ಅವಮಾನಿಸಿದ್ದರು.

  ಆ ಘಟನೆಯನ್ನು ಅವರ ಕೋಚ್ ಯದ್ವಿಂದರ್ ಸೋಧಿ ಈಗ ನೆನಪಿಸಿಕೊಂಡಿದ್ದಾರೆ. 2010-11ರಲ್ಲಿ ಪಂಜಾಬ್ ಸರಕಾರ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರಾಕರಿಸಿತ್ತು ಎಂದು ಅವರು ಹೇಳಿದ್ದಾರೆ.
   ‘‘ಮಹಿಳಾ ಕ್ರಿಕೆಟ್ ಸೇರಿ ಆಗ ಎರಡು ವರ್ಷವಾಗಿದ್ದರೂ ಹರ್ಮನ್‌ಪ್ರೀತ್ ಕೌರ್‌ಗೆ ನೌಕರಿ ಸಿಕ್ಕಿರಲಿಲ್ಲ. ನಾವು ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವಂತೆ ಪೊಲೀಸ್ ಮುಖ್ಯಸ್ಥರಿಗೆ ಮನವಿ ಮಾಡಿದೆವು. ಆಗ ಅವರು ಮಹಿಳಾ ಕ್ರಿಕೆಟಿಗರಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಲು ಅವಕಾಶವಿಲ್ಲ. ನಿಮಗೆ ಕೆಲಸ ಕೊಡಲು ನೀವು ಭಜ್ಜಿ(ಹರ್ಭಜನ್ ಸಿಂಗ್) ಅಲ್ಲ ಎಂದು ಮೂದಲಿಸಿ ಹರ್ಮನ್‌ಪ್ರೀತ್ ಕೌರ್ ಅರ್ಜಿಯನ್ನು ತಿರಸ್ಕರಿಸಿದ್ದರು.
 ‘‘ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಅವರಿಗೆ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್‌ಪಿ ಹುದ್ದೆ ನೀಡಲಾಗಿತ್ತು. ಆದರೆ ಕೌರ್‌ಗೆ ಪೊಲೀಸ್ ನಿರೀಕ್ಷಕರ ಹುದ್ದೆಯೂ ಸಿಗಲಿಲ್ಲ. ನಾವು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ’’ ಎಂದು ಸೋಧಿ ನೆನಪಿಸಿಕೊಂಡಿದ್ದಾರೆ.

  2009ರಿಂದ ಈ ತನಕ ಹರ್ಮನ್‌ಪ್ರೀತ್ ಕೌರ್ ಮಹಿಳಾ ಕ್ರಿಕೆಟ್‌ನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದರೂ ಅವರನ್ನು ಅಭಿನಂದಿಸುವ ನಿಟ್ಟಿನಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ಪಕ್ಷದ ಪ್ರತಿನಿಧಿಯೂ ಅವರ ಮನೆಗೆ ಭೇಟಿ ನೀಡಲಿಲ್ಲ. ಅಕಾಲಿದಳ ಸರಕಾರ ಅಥವಾ ಕಾಂಗ್ರೆಸ್ ಸರಕಾರ ಕೌರ್‌ಗೆ ಉದ್ಯೋಗ ನೀಡಲಿಲ್ಲ’’ ಎಂದು ಕೌರ್ ತಂದೆ ಹರ್ಮಂದರ್ ಸಿಂಗ್ ಭುಲ್ಲ್ಲರ್ ಹೇಳಿದ್ದಾರೆ.
 ರಾಜ್ಯಸಭಾ ಸದಸ್ಯ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮೂಲಕ ಹರ್ಮನ್‌ಪ್ರೀತ್ ಕೌರ್‌ಗೆ ಪಶ್ಚಿಮ ರೈಲ್ವೆಯಲ್ಲಿ 4 ವರ್ಷಗಳ ಹಿಂದೆ ಕೆಲಸ ಸಿಕ್ಕಿತ್ತು. ಹರ್ಮನ್‌ಪ್ರೀತ್ ಉದ್ಯೋಗ ದೊರಕಿಸಿಕೊಂಡುವಂತೆ ಕೇಳಲು ಪ್ರಸ್ತುತ ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಮಾಜಿ ಕ್ರಿಕೆಟ್ ಆಟಗಾರ್ತಿ ಡಯಾನಾ ಎಡುಲ್ಜಿ ಅವರಲ್ಲಿ ಹೋಗಿದ್ದರು.
 ಎಡುಲ್ಜಿ ಅವರು ಸಚಿನ್ ತೆಂಡುಲ್ಕರ್ ಅವರನ್ನು ಸಂಪರ್ಕಿಸಿ ಹರ್ಮನ್‌ಪ್ರೀತ್ ಕೌರ್‌ಗೆ ಉದ್ಯೋಗ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು. ಸಚಿನ್ ತೆಂಡುಲ್ಕರ್ ಕೂಡಲೇ ರೈಲ್ವೇ ಸಚಿವಾಲಯಕ್ಕೆ ಪತ್ರ ಬರೆದು ಕೌರ್‌ಗೆ ಉದ್ಯೋಗ ದೊರಕಿಸಿಕೊಟ್ಟಿದ್ದರು. ಇದರೊಂದಿಗೆ ಹರ್ಮನ್‌ಪ್ರೀತ್ ಕೌರ್ ಎದುರಿಸುತ್ತಿದ್ದ ಸಮಸ್ಯೆ ದೂರವಾಗಿತ್ತು.
ಕಠಿಣ ಶ್ರಮದ ಮೂಲಕ ಕ್ರಿಕೆಟ್‌ನಲ್ಲಿ ಬೆಳೆದ ಹರ್ಮನ್ ಕೌರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧ 36 ರನ್‌ಗಳ ಗೆಲುವು ದಾಖಲಿಸಿ ಫೈನಲ್ ತಲುಪಿದೆ.

 ಕೌರ್ ಸಾಧನೆಯನ್ನು ಎಲ್ಲರೂ ಶ್ಲಾಘಿಸಿದ್ಧಾರೆ. ಭಾರತದ ಮಹಿಳಾ ತಂಡದ ಸಾಧನೆ ಯನ್ನು ಮೆಚ್ಚಿ ಬಿಸಿಸಿಐ ಬಹುಮಾನ ಪ್ರಕಟಿಸಿದೆ. ತಂಡದ ಎಲ್ಲ ಸದಸ್ಯರಿಗೂ ತಲಾ 50 ಲಕ್ಷ ರೂ. ನಗದು ಪುರಸ್ಕಾರ ದೊರೆಯಲಿದೆ. ಆದರೆ ತಂಡದ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದ್ದ ಹರ್ಮನ್‌ಪ್ರೀತ್ ಕೌರ್ ಉದ್ಯೋಗವಿಲ್ಲದೆ ಸಮಸ್ಯೆ ಎದುರಿಸಿದ್ದರೂ ಆಗ ಅವರ ನೆರವಿಗೆ ಯಾರೂ ಬಂದಿರಲಿಲ್ಲ. ಸರಕಾರ ,ಅಧಿಕಾರಿಗಳು , ರಾಜಕಾರಣಿಗಳು ಅವ ಕಡೆಗೆ ಕಣ್ಣೆತ್ತಿಯೂ ನೋಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News