ಐದು ವರ್ಷಗಳ ಬಳಿಕ ಡಬ್ಲ್ಯುಟಿಎ ಟೂರ್ನಿ ಆಯೋಜನೆಗೆ ಭಾರತ ಸಜ್ಜು

Update: 2017-07-25 18:04 GMT

ಹೊಸದಿಲ್ಲಿ, ಜು.25:ಭಾರತ ಐದು ವರ್ಷಗಳ ಬಳಿಕ ಮುಂಬೈ ನಗರದಲ್ಲಿ ಡಬ್ಲ್ಯುಟಿಎ ಟೂರ್ನಮೆಂಟ್‌ನ್ನು ಆಯೋಜಿಸಲಿದೆ. 125,000 ಡಾಲರ್ ಬಹುಮಾನ ಮೊತ್ತದ ಟೂರ್ನಿಯು ಮುಂಬೈನಲ್ಲಿ ನಡೆಯಲಿದ್ದು, ಭಾರತದ ಆಟಗಾರ್ತಿಯರಿಗೆ ವಿಶ್ವದ ಅಗ್ರ-50 ಆಟಗಾರ್ತಿಯರ ವಿರುದ್ಧ ಆಡುವ ಅವಕಾಶ ಲಭಿಸಲಿದೆ.

ಮತ್ತೊಮ್ಮೆ ಮಹಾರಾಷ್ಟ್ರ ರಾಜ್ಯ ಲಾನ ಟೆನಿಸ್ ಸಂಸ್ಥೆ(ಎಂಎಸ್‌ಎಲ್‌ಟಿಎ) ದೇಶಕ್ಕೆ ಅತ್ಯಂತ ಅಗತ್ಯವಿರುವ ಟೂರ್ನಿಯ ಆತಿಥ್ಯವಹಿಸಿಕೊಳ್ಳಲು ಮುಂದೆ ಬಂದಿದೆ.

ಎಂಎಸ್‌ಎಲ್‌ಟಿಎ ಇತ್ತೀಚೆಗೆ ಭಾರತದ ಏಕೈಕ ಎಟಿಪಿ ವರ್ಲ್ಡ್ ಟೂರ್ ಇವೆಂಟ್ ಚೆನ್ನೈ ಓಪನ್‌ನ್ನು ಪುಣೆಯಲ್ಲಿ ನಡೆಸುವ ಹಕ್ಕನ್ನು ಗೆದ್ದುಕೊಂಡಿತ್ತು.

 ‘‘ಅಂಕಿತ್ ರಾಣಾ, ಕರ್ಮಾನ್ ಕೌರ್, ರುತುಜಾ ಭೋಂಸ್ಲೆ ಹಾಗೂ ಇತರರಿಗೆ ವಿಶ್ವದ ಅಗ್ರ ಆಟಗಾರ್ತಿಯರೊಂದಿಗೆ ಆಡುವ ಅವಕಾಶ ಲಭಿಸಲಿದೆ. ಆಟಗಾರರ ಹಿತದೃಷ್ಟಿಯಿಂದ ಈ ಟೂರ್ನಿಯನ್ನು ಮುಂಬೈನಲ್ಲಿ ಆಯೋಜಿಸಲಾಗುತ್ತದೆ ಎಂದು ಎಂಎಸ್‌ಎಲ್‌ಟಿಎ ಕಾರ್ಯದರ್ಶಿ ಸುಂದರ್ ಅಯ್ಯರ್ ಹೇಳಿದ್ದಾರೆ.

ಭಾರತ 2012ರಲ್ಲಿ ಪುಣೆಯಲ್ಲಿ ರಾಯಲ್ ಇಂಡಿಯಾ ಓಪನ್ ಹೆಸರಿನಲ್ಲಿ ಡಬ್ಲುಟಿಎ ಟೂರ್ನಿಯಲ್ಲಿ ಆಯೋಜಿಸಿತ್ತು. ಹಾಲಿ ವಿಶ್ವದ ನಂ.5ನೆ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಜಪಾನ್‌ನ ಹಿರಿಯ ಆಟಗಾರ್ತಿ ಕಿಮಿಕೊ ಡಾಟ್‌ರನ್ನು ಮಣಿಸಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು.

ಭಾರತ ಈ ತನಕ ಎರಡು ಬಾರಿ 15,000 ಡಾಲರ್ ಬಹುಮಾನ ಮೊತ್ತದ ಟೂರ್ನಮೆಂಟ್‌ನ್ನು ಆಯೋಜಿಸಿತ್ತು, ಗ್ವಾಲಿಯರ್ ಹಾಗೂ ಅಹ್ಮದಾಬಾದ್‌ನಲ್ಲಿ ಈ ಟೂರ್ನಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News