ಯುಎಸ್ ಓಪನ್‌ಗೆ ಜೊಕೊವಿಕ್ ಅಲಭ್ಯ

Update: 2017-07-25 18:15 GMT

ಲಂಡನ್, ಜು.25: ಮೊಣಕೈನೋವಿನಿಂದ ಬಳಲುತ್ತಿರುವ ವಿಶ್ವ ಮಾಜಿ ನಂ.1 ಆಟಗಾರ ನೊವಾಕ್ ಜೊಕೊವಿಕ್ ಮುಂಬರುವ ಯುಎಸ್ ಓಪನ್‌ನಲ್ಲಿ ಆಡುವುದು ಅನುಮಾನ ಎಂದು ಸ್ಪೇನ್‌ನ ಡೇವಿಸ್‌ಕಪ್ ತಂಡದ ವೈದ್ಯರ ಹೇಳಿಕೆ ಉಲ್ಲೇಖಿಸಿ ಸರ್ಬಿಯ ಮಾಧ್ಯಮ ವರದಿ ಮಾಡಿದೆ.

 ವಿಂಬಲ್ಡನ್‌ನ ಕ್ವಾರ್ಟರ್ ಫೈನಲ್ ಪಂದ್ಯ ಆಡುತ್ತಿದ್ದಾಗಲೇ ಜೊಕೊವಿಕ್‌ಗೆ ಗಾಯದ ಸಮಸ್ಯೆ ಕಾಣಿಸಿಕೊಂಡ ಕಾರಣ ಪಂದ್ಯದಿಂದ ಹಿಂದೆ ಸರಿದಿದ್ದರು. ಜೊಕೊವಿಕ್ ಇತ್ತೀಚೆಗೆ ದೀರ್ಘ ಸಮಯದಿಂದ ಕಾಡುತ್ತಿರುವ ಬಲ ಮೊಣಕೈ ನೋವಿನಿಂದ ಚೇತರಿಸಿಕೊಳ್ಳಲು ದೀರ್ಘ ವಿಶ್ರಾಂತಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದರು.

ಬಿಡುವಿಲ್ಲದ ಟೆನಿಸ್‌ನಿಂದಾಗಿ ಜೊಕೊವಿಕ್‌ರ ಮೂಳೆ ಜಜ್ಜಿಹೋಗಿದ್ದು, ಪ್ರಸ್ತುತ ಟೊರೊಂಟೊದಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊಕೊವಿಕ್ 12 ವಾರಗಳ ಕಾಲ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ ಎಂದು ಸರ್ಬಿಯದ ‘ಸ್ಪೋರ್ಟ್ಸ್‌ಸ್ಕೈ’ ವರದಿ ಮಾಡಿದೆ.

12 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ 2011 ಹಾಗೂ 2015ರಲ್ಲಿ ಯುಎಸ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ವರ್ಷದ ಯುಎಸ್ ಓಪನ್ ಆಗಸ್ಟ್ 8 ರಿಂದ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News