2021ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗೆ ಭಾರತ ಆತಿಥ್ಯ

Update: 2017-07-25 18:26 GMT

ಹೊಸದಿಲ್ಲಿ, ಜು.25: ಭಾರತೀಯ ಬಾಕ್ಸಿಂಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಭಾರತ 2021ರಲ್ಲಿ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಆತಿಥ್ಯವಹಿಸಿಕೊಳ್ಳಲಿದೆ.

ಮಾಸ್ಕೊದಲ್ಲಿ ನಡೆದ ದ್ವಿದಿನ ಕಾರ್ಯಕಾರಿಣಿ ಸಮಿತಿ ಸಭೆಯ ಅಂತ್ಯದಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ(ಎಐಬಿಎ) ಈ ಮಹತ್ವದ ಘೋಷಣೆ ಮಾಡಿದೆ.

‘‘2019ರ ಪುರುಷರ ವಿಶ್ವ ಚಾಂಪಿಯನ್‌ಶಿಪ್ ಸೋಚಿಯಲ್ಲಿ ನಡೆಯಲಿದೆ ಎಂದು ಘೋಷಿಸಲು ನಮಗೆ ತುಂಬಾ ಹೆಮ್ಮೆಯಾಗುತ್ತಿದೆ. 2021ರ ವಿಶ್ವ ಚಾಂಪಿಯನ್‌ಶಿಪ್‌ನ ಆತಿಥ್ಯವನ್ನು ಹೊಸದಿಲ್ಲಿ ವಹಿಸಿಕೊಳ್ಳಲಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಭಾರತದ ಬಾಕ್ಸಿಂಗ್ ಫೆಡರೇಶನ್ ಕ್ರೀಡೆಯ ಬೆಳವಣಿಗೆಗೆ ತನ್ನ ಬದ್ಧತೆಯನ್ನು ಮುಂದುವರಿಸಬೇಕು’’ ಎಂದು ಎಐಬಿಎ ಅಧ್ಯಕ್ಷ ಡಾ. ಚಿಂಗ್ ಕ್ಯೂಯೊ ವೂ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.

ಭಾರತ ಈವರೆಗೆ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ್ನು ಆಯೋಜಿಸಿಲ್ಲ. 1990ರಲ್ಲಿ ಮುಂಬೈನಲ್ಲಿ ಬಾಕ್ಸಿಂಗ್ ವಿಶ್ವಕಪ್ ಹಾಗೂ 2010ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಗೇಮ್ಸ್‌ನಂತಹ ಪ್ರಮುಖ ಟೂರ್ನಿಯ ಆತಿಥ್ಯವಹಿಸಿಕೊಂಡಿದೆ.

ಭಾರತ 2017ರಲ್ಲಿ ಮಹಿಳೆಯರ ವಿಶ್ವ ಚಾಂಪಿಯನ್‌ಶಿಪ್‌ನ ಆತಿಥ್ಯವಹಿಸಿಕೊಳ್ಳಲಿದ್ದು, ಇದೀಗ ಮೊದಲ ಬಾರಿ ಸತತ ಎರಡು ಪ್ರಮುಖ ಚಾಂಪಿಯನ್‌ಶಿಪ್‌ನ್ನು ಆಯೋಜಿಸುವ ಅಪೂರ್ವ ಅವಕಾಶ ಪಡೆದುಕೊಂಡಿದೆ. ಬಾಕ್ಸಿಂಗ್‌ನಲ್ಲಿ ಭಾರತ ಮುಖ್ಯ ಶಕ್ತಿಕೇಂದ್ರವಾಗುವುದನ್ನು ಎಐಬಿಎ ಬಯಸಿದೆ. ಈ ಚಾಂಪಿಯನ್‌ಶಿಪ್‌ಗಳು ಪವರ್‌ಹೌಸ್ ಆಗಲು ಪೂರಕ ಹೆಜ್ಜೆಯಾಗಿದೆ ಎಂದು ಭಾರತದ ಬಾಕ್ಸಿಂಗ್ ಫೆಡರೇಶನ್‌ನ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.

ಆಡಳಿತಾತ್ಮಕ ಕಾರಣಕ್ಕೆ 2012 ಹಾಗೂ 2016ರ ನಡುವೆ ಅಮಾನತು ಗೊಂಡಿದ್ದ ಭಾರತದ ಬಾಕ್ಸಿಂಗ್ ಫೆಡರೇಶನ್ ಕಳೆದ ವರ್ಷ ಅಮಾನತಿನಿಂದ ಹೊರಬಂದಿತ್ತು.

ಭಾರತ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು ಮೂರು ಪದಕಗಳನ್ನು ಜಯಿಸಿದ್ದು, ಎಲ್ಲವೂ ಕಂಚಿನ ಪದಕಗಳಾಗಿವೆ. ವಿಜೇಂದರ್ ಸಿಂಗ್(2009),ವಿಕಾಸ್ ಕ್ರಿಶನ್(2011) ಹಾಗೂ ಶಿವ ಥಾಪ(2015) ಕಂಚಿನ ಪದಕ ಜಯಿಸಿದ್ದಾರೆ.

‘‘ಭಾರತದ ಬಾಕ್ಸಿಂಗ್‌ಗೆ ಇದು ಖಂಡಿತವಾಗಿಯೂ ಐತಿಹಾಸಿಕ ಕ್ಷಣ. ಇದು ಫೆಡರೇಶನ್‌ನ ಸಾಮರ್ಥ್ಯವನ್ನು ತೋರಿಸುತ್ತದೆ. ಇಂತಹ ಚಾಂಪಿಯನ್‌ಶಿಪ್‌ನ ಆತಿಥ್ಯವಹಿಸಿಕೊಳ್ಳುವುದು ಭಾರತಕ್ಕೆ ಅತ್ಯಂತ ಮುಖ್ಯ’’ಎಂದು ಭಾರತದ ಬಾಕ್ಸಿಂಗ್ ಕೋಚ್ ಸ್ಯಾಂಟಿಯಾಗೊ ನೀವಾ ಹೇಳಿದ್ದಾರೆ.

‘‘ಇದು ಭಾರತಕ್ಕೆ ಸಿಹಿ ಸುದ್ದಿ. ನಾನು ಫಿಟ್ ಇದ್ದರೆ 48 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸುವೆ. 2006ರಲ್ಲಿ ಚಿನ್ನ ಗೆದ್ದ ಕ್ಷಣವನ್ನು ಯಾವತ್ತೂ ಮರೆಯಲಾರೆ’’ಎಂದು ಹಿರಿಯ ಬಾಕ್ಸಿಂಗ್ ತಾರೆ ಮೇರಿ ಕೋಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News