ಮುಂಬೆ ಏರ್‌ಪೋರ್ಟ್‌ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಭವ್ಯ ಸ್ವಾಗತ

Update: 2017-07-26 18:12 GMT

ಮುಂಬೈ, ಜು.26: ಬೆಳಗ್ಗೆ 3:45ರ ಸುಮಾರಿಗೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದ ನೂರಾರು ಕ್ರಿಕೆಟ್ ಅಭಿಮಾನಿಗಳು ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಅದ್ದೂರಿ ಸ್ವಾಗತ ನೀಡಿದರು. ಇಂಗ್ಲೆಂಡ್‌ನಲ್ಲಿ ನಡೆದ ಮಹಿಳೆಯರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತದ ಮಹಿಳಾ ತಂಡ ದೇಶದ ಗಮನವನ್ನು ತನ್ನತ್ತ ಸೆಳೆದಿದ್ದಲ್ಲದೆ, ಅಭಿಮಾನಿಗಳಿಂದ ಭಾರೀ ಬೆಂಬಲ ಹಾಗೂ ಶ್ಲಾಘನೆಗೆ ಪಾತ್ರವಾಗಿದೆ.

ಬುಧವಾರ ಬೆಳಗಿನ ಜಾವ ವಿಮಾನ ನಿಲ್ದಾಣಕ್ಕೆ ತೆರಳಿದ ನೂರಾರು ಕ್ರಿಕೆಟ್ ಅಭಿಮಾನಿಗಳು ಮಹಿಳಾ ತಂಡಕ್ಕೆ ಭವ್ಯ ಸ್ವಾಗತ ನೀಡಿದರು. ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯರು ಛತ್ರಪತಿ ಶಿವಾಜಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ಗೆ ಆಗಮಿಸಿದ ತಕ್ಷಣ ಅಭಿಮಾನಿಗಳಿಂದ ಹರ್ಷೋದ್ಗಾರ ಹಾಗೂ ಚಪ್ಪಾಳೆ ಮೊಳಗಿತು.

ಮಹಿಳಾ ಐಪಿಎಲ್ ಆರಂಭವಾಗುವ ದಿನ ದೂರವಿಲ್ಲ: ಮಿಥಾಲಿ

‘‘ನಮ್ಮ ತಂಡ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗುವ ದಿನಗಳು ದೂರವಿಲ್ಲ’’ ಎಂದು ಭಾರತದ ನಾಯಕಿ ಮಿಥಾಲಿ ರಾಜ್ ಅಭಿಪ್ರಾಯಪಟ್ಟಿದ್ದಾರೆ.

 ಶೀಘ್ರವೇ ಮಹಿಳೆಯರ ಐಪಿಎಲ್ ಆರಂಭವಾಗುವುದನ್ನು ನಿರೀಕ್ಷಿಸುತ್ತಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮಿಥಾಲಿ,‘‘ ಇದೇ ಪ್ರಶ್ನೆಯನ್ನು ಕೆಲವು ವರ್ಷಗಳ ಹಿಂದೆ ಕೇಳಿದ್ದರೆ ಮಹಿಳಾ ಐಪಿಎಲ್‌ಗೆ ನನ್ನ ಬೆಂಬಲವಿರುತ್ತಿರಲಿಲ್ಲ. ಆದರೆ,ವಿಶ್ವಕಪ್‌ನ ಬಳಿಕ ಎಲ್ಲವೂ ಬದಲಾಗಿದೆ. ಮಹಿಳಾ ಕ್ರಿಕೆಟ್‌ನ ಗುಣಮಟ್ಟದಲ್ಲಿ ಸಾಕಷ್ಟು ಸುಧಾರಣೆಯಾಗಿದೆ’’ ಎಂದರು.

 ‘‘ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಲೀಗ್‌ನಿಂದಾಗಿಯೇ 300ಕ್ಕೂ ಅಧಿಕ ಸ್ಕೋರ್, ಪ್ರತಿ ತಂಡದಿಂದ ಶತಕ ಹಾಗೂ ಬೌಲರ್‌ಗಳು ಐದು ವಿಕೆಟ್ ಗೊಂಚಲು ಪಡೆಯಲು ಸಾಧ್ಯವಾಗಿದೆ. ಕ್ರಿಕೆಟ್ ಲೀಗ್‌ನಿಂದ ಕೆಲವು ಆಟಗಾರ್ತಿಯರು ತಮ್ಮ ಆಟದ ಶೈಲಿಯನ್ನು ಸುಧಾರಿಸಿಕೊಂಡಿದ್ದಾರೆ. ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ’’ಎಂದು ಮಿಥಾಲಿ ಹೇಳಿದ್ದಾರೆ.

‘‘ಮಹಿಳಾ ಪಂದ್ಯಗಳು ಹೆಚ್ಚು ನೇರ ಪ್ರಸಾರವಾದರೆ ನಾವು ಹೆಚ್ಚು ಜನರನ್ನು ಆಕರ್ಷಿಸಬಹುದು. ವಿಶ್ವಕಪ್‌ನಲ್ಲಿ ನಮ್ಮ ಆಟಗಾರ್ತಿಯರ ಉತ್ತಮ ಪ್ರದರ್ಶನ ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಮಹಿಳಾ ಕ್ರಿಕೆಟ್ ಪ್ರಸಿದ್ಧಿ ಪಡೆಯುತ್ತಿದೆ’’ ಎಂದು ಮಿಥಾಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News