×
Ad

ಅಧಿಕಾರಿಗೆ ಮಣೆ ಹಾಕಲು ಅಥ್ಲೀಟ್‌ಗಳನ್ನು ಕಡೆಗಣಿಸಿದ ಎಎಫ್‌ಐ

Update: 2017-07-26 23:54 IST

ಬೆಂಗಳೂರು, ಜು.26: ಭಾರತದ ಅಥ್ಲೆಟಿಕ್ ಫೆಡರೇಶನ್(ಎಎಫ್‌ಐ)ಅಧಿಕಾರಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ಅಥ್ಲೀಟ್‌ಗಳನ್ನು ತಂಡದಿಂದ ಹೊರಗಿಟ್ಟಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ.

ಮುಂದಿನ ತಿಂಗಳು ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಓರ್ವ ಐಎಎಸ್ ಅಧಿಕಾರಿ ಸಹಿತ 13 ಅಧಿಕಾರಿಗಳನ್ನು ಅಥ್ಲೀಟ್ ತಂಡದೊಂದಿಗೆ ಕಳುಹಿಸಿಕೊಡಲು ಎಎಫ್‌ಐ ನಿರ್ಧರಿಸಿದೆ.

  ಭುವನೇಶ್ವರದಲ್ಲಿ ಇತ್ತೀಚೆಗೆ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ್ನು ಯಶಸ್ವಿಯಾಗಿ ಆಯೋಜಿಸಿದ್ದ ಒಡಿಶಾದ ಐಎಎಸ್ ಅಧಿಕಾರಿ ವಿಶಾಲ್ ಕುಮಾರ್ ದೇವ್ ಭಾರತದ ಅಥ್ಲೀಟ್‌ಗಳ ನೇತೃತ್ವವಹಿಸಿಕೊಂಡಿದ್ದಾರೆ. ಎಎಫ್‌ಐ ಅಧಿಕಾರಿ ಟೋನಿ ಡೇನಿಯಲ್ ಟೀಮ್ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ. ಆದರೆ, ಭುವನೇಶ್ವರದಲ್ಲಿ ನಡೆದಿದ್ದ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿ ನೇರ ಪ್ರವೇಶ ಪಡೆದಿದ್ದ ಮೂವರು ಅಥ್ಲೀಟ್‌ಗಳಾದ ಸುಧಾ ಸಿಂಗ್, ಪಿ.ಯು. ಚಿತ್ರಾ ಹಾಗೂ ಅಜಯ್ ಕುಮಾರ್ ಸರೋಜ್‌ರನ್ನು ತಂಡದಿಂದ ಕೈಬಿಟ್ಟಿರುವ ಎಎಫ್‌ಐ ಎಲ್ಲರನ್ನು ಅಚ್ಚರಿಗೊಳಿಸಿದೆ.

ಆಯ್ಕೆಗಾರರ ‘ಇಬ್ಬಗೆ ನೀತಿ’ಯನ್ನು ಪ್ರಶ್ನಿಸಿದ ಏಷ್ಯನ್ ಚಾಂಪಿಯನ್ ಸುಧಾ ಸಿಂಗ್, ಆಯ್ಕೆ ಸಮಿತಿಯ ಮುಖ್ಯಸ್ಥ ಗುರ್ಬಚನ್ ಸಿಂಗ್ ರಾಂಧವಾ ‘ಅಥ್ಲೀಟ್‌ಗಳ ಹಿತಾಸಕ್ತಿ’ಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  ‘‘ರಾಂಧವಾಜೀ ನನ್ನ ವಯಸ್ಸೆಷ್ಟು ಎಂದು ಕೇಳಿದ್ದರು. ನಾನು 1986ರಲ್ಲಿ ಜನಿಸಿದ್ದಾಗಿ ತಿಳಿಸಿದ್ದೆ. ನನ್ನ ವಯಸ್ಸು ಹೆಚ್ಚಾಗಿದೆ ಎಂದು ಹೇಳಿದರು. ರಾಂಧವಾಜೀ ಅಥ್ಲೀಟ್‌ಗಳ ವಯಸ್ಸಿನ ಆಧಾರದಲ್ಲಿ ವೃತ್ತಿಜೀವನ ಅಂತ್ಯಗೊಳಿಸಿದ್ದು ಹೇಗೆ?ವಯಸ್ಸೇ ಮಾನದಂಡವಾಗಿದ್ದರೆ ನನ್ನನ್ನು ರಾಷ್ಟ್ರೀಯ ಶಿಬಿರಕ್ಕೆ ಸೇರಿಸಿಕೊಂಡಿದ್ದೇಕೆ? ಏಷ್ಯನ್ ಚಾಂಪಿಯನ್‌ಶಿಪ್‌ಗಿಂತ ಮೊದಲು ಚಿನ್ನ ಗೆಲ್ಲುವವರನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂದು ನಮಗೆ ಹೇಳಿದ್ದರು. ಆದರೆ, ನಾವು ಆಯ್ಕೆ ಮಾನದಂಡವನ್ನು ತಲುಪಿಲ್ಲ ಎಂದು ಈಗ ಅವರು ಹೇಳುತ್ತಿದ್ದಾರೆ. ಭುವನೇಶ್ವರದಲ್ಲಿ ನನಗೆ ಯಾರೂ ಸ್ಪರ್ಧೆ ಒಡ್ಡಿರಲಿಲ್ಲ. ತಂಡದಲ್ಲಿ ಸ್ಥಾನ ಪಡೆಯಲು ಚಿನ್ನ ಗೆಲ್ಲಬೇಕೆಂಬ ಗುರಿ ಹಾಕಿಕೊಂಡಿದ್ದೆ. ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಶಿಬಿರದಲ್ಲಿ ನಾನು ಭಾಗವಹಿಸಿ ಸಾಕಷ್ಟು ಅಭ್ಯಾಸ ನಡೆಸಿದ್ದೇನೆ. ಇದೀಗ ರಾಷ್ಟ್ರೀಯ ಅಥ್ಲೀಟ್‌ಗಳ ತಂಡದಿಂದ ಹೊರಗಿಡಲಾಗಿದೆ. ನಾನು ಈಗಾಗಲೇ ಎರಡು ಒಲಿಂಪಿಕ್ಸ್ ಹಾಗೂ 2 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡಿದ್ದಾಗಿ ಅವರು ಹೇಳುತ್ತಿದ್ದಾರೆ’’ ಎಂದು 2010ರ ಏಷ್ಯಾ ಚಾಂಪಿಯನ್ ಸುಧಾ ಬೇಸರ ವ್ಯಕ್ತಪಡಿಸಿದರು.

ಸುಧಾ ಆಯ್ಕೆಗಾರರ ವಿರುದ್ಧ ಕಿಡಿಕಾರಿದರೆ, ಕೇರಳದ ಅಥ್ಲೀಟ್ ಚಿತ್ರಾ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಎಎಫ್‌ಐನ ಮಾಜಿ ಅಧಿಕಾರಿಯೊಬ್ಬರು ಆಯ್ಕೆಗಾರರು ಮೂವರು ಅಥ್ಲೀಟ್‌ಗಳನ್ನು ತಂಡದಿಂದ ಹೊರಗಿಟ್ಟಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘‘ಕಳಪೆ ಟೈಮಿಂಗ್‌ನ ಕಾರಣ ನೀಡಿ ಮೂವರು ಅಥ್ಲೀಟ್‌ಗಳನ್ನು ಹೊರಗಿಡಲಾಗಿದೆ. ಆದರೆ, ಅರ್ಹತಾ ಮಾರ್ಕನ್ನು ತಲುಪದ ಜಿ. ಲಕ್ಷ್ಮಣನ್‌ರನ್ನು ಆಯ್ಕೆ ಮಾಡಲಾಗಿದೆ. ಪುರುಷರ 4x400 ಮೀ. ರಿಲೇ ತಂಡಕ್ಕೆ ಸಚಿನ್ ರಾಬಿ ಅವರನ್ನು ಆಯ್ಕೆ ಮಾಡಿರುವುದು ನನಗೆ ಅಚ್ಚರಿ ತಂದಿದೆ. ಸಚಿನ್ ಗುಂಟೂರ್‌ನಲ್ಲಿ ನಡೆದಿದ್ದ ಅಂತರ್-ರಾಜ್ಯ ಕ್ರೀಡಾಕೂಟದಲ್ಲಿ 400ಮೀ.ಫೈನಲ್‌ನಲ್ಲಿ 7ನೆ ಸ್ಥಾನ ಪಡೆದಿದ್ದರು’’ ಎಂದು ಎಎಫ್‌ಐನ ಮಾಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News