ಭಾರತದ ಮಹಿಳಾ ಕ್ರಿಕೆಟಿಗರಿಗೆ ರೈಲ್ವೆಯಿಂದ 1.30 ಕೋ.ರೂ. ಉಡುಗೊರೆ

Update: 2017-07-27 18:01 GMT

ಹೊಸದಿಲ್ಲಿ, ಜು.27: ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಗಳಾಗಿರುವ ಭಾರತದ ಮಹಿಳಾ ಕ್ರಿಕೆಟ್ ತಂಡದ 10 ಸದಸ್ಯೆಯರಿಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ 1.30 ಕೋ.ರೂ. ಬಹುಮಾನ ಘೋಷಿಸಿದ್ದಾರೆ. ನಾಯಕಿ ಮಿಥಾಲಿ ರಾಜ್ ಹಾಗೂ ಉಪ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ಪತ್ರಾಂಕಿತ ಅಧಿಕಾರಿ ಆಗಿ ಭಡ್ತಿ ನೀಡಲಾಗಿದ್ದು, ತಂಡದ ಉಳಿದ ಆಟಗಾರ್ತಿಯರಿಗೂ ಭಡ್ತಿ ನೀಡಲಾಗಿದೆ ಎಂದು ಪ್ರಭು ಘೋಷಿಸಿದರು.

‘‘ವಿಶ್ವಕಪ್‌ನಲ್ಲಿ ಮಹಿಳಾ ತಂಡದ ಸಾಧನೆಯು ರೈಲ್ವೆಗೆ ವಿಶೇಷ ಹೆಮ್ಮೆ ತಂದಿದೆ. 15 ವಿಶ್ವ ದರ್ಜೆಯ ಕ್ರಿಕೆಟಿಗರ ಪೈಕಿ 10 ಮಂದಿ ರೈಲ್ವೆಯಲ್ಲಿ ಉದ್ಯೋಗದಲ್ಲಿದ್ದಾರೆ. ನಾಯಕಿ, ಉಪನಾಯಕಿ, ವಿಕೆಟ್‌ಕೀಪರ್, ಗರಿಷ್ಠ ಸ್ಕೋರರ್ ಎಲ್ಲರೂ ರೈಲ್ವೆಯ ಉದ್ಯೋಗಿಗಳಾಗಿದ್ದಾರೆ’’ ಎಂದು ರೈಲ್ವೆ ಭವನದಲ್ಲಿ ಮಹಿಳಾ ಕ್ರಿಕೆಟಿಗರನ್ನು ಗೌರವಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಭು ತಿಳಿಸಿದ್ದಾರೆ.

 ‘‘ಮಾಜಿ ನಾಯಕಿ ಡಯಾನಾ ಎಡುಲ್ಜಿ ಅವರ ಬಳಿ ನೀವು ಯಾವಾಗ ಕ್ರಿಕೆಟ್ ಆಡಲು ಆರಂಭಿಸಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು 1971ರಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದಾಗಿ ಹೇಳಿದರು. 46 ವರ್ಷಗಳ ಹಿಂದೆಯೇ ಅವರು ಕ್ರಿಕೆಟ್ ಆಡಲು ಆರಂಭಿಸಿದ್ದರು. ನಮ್ಮ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್‌ನ ಫೈನಲ್‌ಗೆ ತಲುಪಬಹುದೆಂದು ಎಡುಲ್ಜಿ ಕೂಡ ಯೋಚಿಸಿರಲಿಲ್ಲ. ಯಾರೂ ಕೂಡ ಮಹಿಳಾ ತಂಡ ಇಷ್ಟೊಂದು ಸಾಧನೆ ಮಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ’’ಎಂದು ಪ್ರಭು ಅಭಿಪ್ರಾಯಪಟ್ಟರು.

ಕ್ರೀಡಾ ಸಚಿವ ವಿಜಯ್ ಗೋಯೆಲ್‌ರಿಂದ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಸನ್ಮಾನ

ಮಹಿಳೆಯರ ಐಸಿಸಿ ವಿಶ್ವಕಪ್‌ನಲ್ಲಿ ಚಿತ್ತಾಕರ್ಷಕ ಪ್ರದರ್ಶನ ನೀಡಿದ್ದ ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಗುರುವಾರ ಸನ್ಮಾನಿಸಿದರು. ರವಿವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ತನಕ ಹೋರಾಟ ನೀಡಿದ್ದ ಭಾರತ 9 ರನ್‌ಗಳಿಂದ ಸೋತಿತ್ತು. ವೀರೋಚಿತ ಸೋಲುಂಡಿದ್ದ ಭಾರತ ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿತ್ತು.

‘‘ನಮ್ಮ ಮಹಿಳಾ ಕ್ರಿಕೆಟ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಈ ತಂಡವನ್ನು ಎಷ್ಟು ಶ್ಲಾಘಿಸಿದರೂ ಕಡಿಮೆ. ಟೂರ್ನಿಯಲ್ಲಿ ರನ್ನರ್-ಅಪ್ ಎನಿಸಿಕೊಂಡರೂ ಇಡೀ ದೇಶದ ಜನತೆಯ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕ್ರಿಕೆಟ್ ಆಟಗಾರ್ತಿಯರು ದೇಶದ ಮಿಲಿಯನ್ ಯುವತಿಯರಿಗೆ ಸ್ಫೂರ್ತಿಯಾಗಿದಾರೆ’’ ಎಂದು ಗೋಯೆಲ್ ತಿಳಿಸಿದ್ದಾರೆ.

‘‘ರಿಯೋ ಒಲಿಂಪಿಕ್ಸ್‌ನಿಂದ ಪ್ಯಾರಾಲಿಂಪಿಕ್ಸ್ ತನಕ, ಹಾಕಿ, ಕುಸ್ತಿ, ಬ್ಯಾಡ್ಮಿಂಟನ್ ಹಾಗೂ ಇದೀಗ ಮಹಿಳಾ ವಿಶ್ವಕಪ್‌ನಲ್ಲೂ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಮಹಿಳೆಯರ ಈ ಪ್ರದರ್ಶನ ಮುಂಬರುವ ಅಂಡರ್-17 ವಿಶ್ವಕಪ್‌ನಲ್ಲಿ ಭಾರತದ ಫುಟ್ಬಾಲ್ ತಂಡ ಉತ್ತಮ ಪ್ರದರ್ಶನ ನೀಡಲು ಪ್ರೇರಣೆಯಾಗಲಿ’’ ಎಂದು ಗೋಯೆಲ್ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News