ಗೋಲ್ಡ್ ಕಪ್: ಅಮೆರಿಕ ಚಾಂಪಿಯನ್

Update: 2017-07-27 18:07 GMT

ಸಾಂಟಾ ಕ್ಲಾರಾ(ಅಮೆರಿಕ), ಜು.27: ಜೋರ್ಡನ್ ಮೊರಿಸ್ ಕೊನೆಯ ಕ್ಷಣದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಆತಿಥೇಯ ಅಮೆರಿಕ ಫುಟ್ಬಾಲ್ ತಂಡ ಜಮೈಕಾ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಕೊನ್‌ಕಾಕೆಫ್ ಗೋಲ್ಡ್ ಕಪ್‌ನ್ನು ತನ್ನದಾಗಿಸಿಕೊಂಡಿದೆ.

ಅಮೆರಿಕ ಆರನೆ ಬಾರಿ ಗೋಲ್ಡ್ ಕಪ್ ಕಿರೀಟವನ್ನು ಧರಿಸಿದ್ದು, ಮೆಕ್ಸಿಕೋ ಏಳು ಬಾರಿ ಈ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿತ್ತು. 89ನೆ ನಿಮಿಷದಲ್ಲಿ ಗೋಲು ಬಾರಿಸಿದ ಮೊರಿಸ್ ಅಮೆರಿಕಕ್ಕೆ ರೋಚಕ ಗೆಲುವು ತಂದರು. ಜೊಝಿ ಅಲ್ಟಿಡೊರ್ 45ನೆ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಅಮೆರಿಕ 1-0 ಮುನ್ನಡೆ ಸಾಧಿಸಿತ್ತು. ಆದರೆ, 50ನೆ ನಿಮಿಷದಲ್ಲಿ ಗೋಲು ದಾಖಲಿಸಿದ ಜಿ-ವಾನ್ ವ್ಯಾಟ್ಸನ್ ಜಮೈಕಾ 1-1 ರಿಂದ ಸಮಬಲ ಸಾಧಿಸಲು ನೆರವಾದರು. ಜಮೈಕಾ ತಂಡ ಎರಡನೆ ಬಾರಿ ಗೋಲ್ಡ್ ಕಪ್ ಫೈನಲ್‌ನಲ್ಲಿ ಆಡಿದೆ. 2015ರಲ್ಲಿ ಫೈನಲ್‌ಗೆ ತಲುಪಿದ್ದ ಜಮೈಕಾ ತಂಡ ಮೆಕ್ಸಿಕೋ ವಿರುದ್ಧ ಸೋತಿತ್ತು. ಈ ವರ್ಷ ಸೆಮಿ ಫೈನಲ್‌ನಲ್ಲಿ ಮೆಕ್ಸಿಕೋ ತಂಡವನ್ನು ಮಣಿಸಿ ಫೈನಲ್‌ಗೆ ತಲುಪುವ ಮೂಲಕ ಈ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿತ್ತು.

 ಗೋಲ್ಡ್‌ಕಪ್ ಫೈನಲ್‌ನಲ್ಲಿ ಮುಗ್ಗರಿಸಿರುವ ಜಮೈಕಾ ಟೂರ್ನಮೆಂಟ್‌ನಲ್ಲಿ ಉತ್ತರ ಅಮೆರಿಕನ್ನರ ಪ್ರಾಬಲ್ಯಕ್ಕೆ ಅಂತ್ಯಹಾಡಲು ವಿಫಲವಾಗಿದೆ. ಗೋಲ್ಡ್‌ಕಪ್ ಟೂರ್ನಿ ಪ್ರಾರಂಭಗೊಂಡ ಬಳಿಕ ಮೆಕ್ಸಿಕೋ ಹಾಗೂ ಅಮೆರಿಕ ತಂಡಗಳು ಟ್ರೋಫಿಗಳನ್ನು ಗೆಲ್ಲುತ್ತಾ ಬಂದಿವೆ. 2000ರಲ್ಲಿ ಮಾತ್ರ ಕೆನಡಾ ಪ್ರಶಸ್ತಿಯನ್ನು ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News