ಝೆಕ್ ಬಾಕ್ಸಿಂಗ್ ಟೂರ್ನಿ: ಶಿವ ಥಾಪ ಸಹಿತ ನಾಲ್ವರು ಸೆಮಿಫೆನಲ್‌ಗೆ

Update: 2017-07-27 18:19 GMT

ಹೊಸದಿಲ್ಲಿ, ಜು.27: ಝೆಕ್ ರಿಪಬ್ಲಿಕ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಶಿವ ಥಾಪ(60ಕೆಜಿ) ಸಹಿತ ನಾಲ್ವರು ಬಾಕ್ಸರ್‌ಗಳು ಸೆಮಿ ಫೈನಲ್ ತಲುಪಿದ್ದಾರೆ. ಈ ಮೂಲಕ ಪದಕವನ್ನು ದೃಢಪಡಿಸಿದ್ದಾರೆ.

ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಶಿವ ಬುಧವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಳೀಯ ಫೇವರಿಟ್ ಎರಿಕ್ ಹೂಲೆವ್‌ರನ್ನು ಮಣಿಸಿ ಅಂತಿಮ ನಾಲ್ಕರ ಸುತ್ತು ಪ್ರವೇಶಿಸಿದರು.

ಭಾರತದ ಇತರ ಮೂವರು ಬಾಕ್ಸರ್‌ಗಳಾದ ಗೌರವ್ ಬಿಧುರಿ(56ಕೆ.ಜಿ.), ಕವಿಂದರ್ ಬಿಷ್ಟ್(52ಕೆ.ಜಿ.) ಹಾಗೂ ಅಮಿತ್ ಫಾಂಗಲ್(49ಕೆ.ಜಿ.) ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಕಂಚಿನ ಪದಕಗಳನ್ನು ದೃಢಪಡಿಸಿದ್ದಾರೆ.

 ಸುಮಿತ್ ಸಾಂಗ್ವಾನ್(91ಕೆ.ಜಿ.) ಹಾಗೂ ಮನೀಷ್ ಪಾನ್ವರ್(81ಕೆ.ಜಿ.) ಮೊದಲ ಸುತ್ತಿನ ಪಂದ್ಯಗಳನ್ನು ಗೆಲ್ಲುವುದರೊಂದಿಗೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಸುಮಿತ್ ಝೆಕ್‌ನ ಜಿರಿ ಹೊರ್ಕಿ ಅವರನ್ನು ಮಣಿಸಿದರೆ, ಮನೀಷ್ ಬೆಲ್ಜಿ ಯಂನ ಯಾಸಿನ್ ಅಯಿಡಿರ್‌ರನ್ನು ಸೋಲಿಸಿದರು.

ಸತೀಶ್ ಕುಮಾರ್(+91ಕೆ.ಜಿ.), ಮನೋಜ್‌ಕುಮಾರ್(69ಕೆಜಿ) ಹಾಗೂ ಆಶೀಷ್ ಕುಮಾರ್(64ಕೆ.ಜಿ.) ಮೊದಲ ಸುತ್ತಿನಲ್ಲಿ ಬೈ ಪಡೆದು ಅಂತಿಮ-8ರ ಸುತ್ತು ಪ್ರವೇಶಿಸಿದರು.

ಪ್ರಸ್ತುತ ಟೂರ್ನಮೆಂಟ್‌ನಲ್ಲಿ ಆಡುತ್ತಿರುವ ಭಾರತದ 9 ಬಾಕ್ಸರ್‌ಗಳ ಪೈಕಿ ಏಳು ಮಂದಿ ಆಗಸ್ಟ್ 25 ರಿಂದ ಸೆ.2ರ ತನಕ ಜರ್ಮನಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.
ಅಮಿತ್, ಕವಿಂದರ್, ಗೌರವ್, ಶಿವ, ಮನೋಜ್, ಸುಮಿತ್ ಹಾಗೂ ಸತೀಶ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.
ವಿಕಾಸ್ ಕೃಷ್ಣನ್(75ಕೆಜಿ) ಕೂಡ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ. ಅವರು ಪ್ರಸ್ತುತ ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News