ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಸುಲಭ ಜಯ

Update: 2017-07-29 18:17 GMT

ಪ್ರಿಟೋರಿಯ, ಜು.29: ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಭಾರತ ‘ಎ’ ತಂಡ ಅಫ್ಘಾನಿಸ್ತಾನ ‘ಎ’ ತಂಡದ ವಿರುದ್ಧ ತ್ರಿಕೋನ ಏಕದಿನ ಟೂರ್ನಮೆಂಟ್‌ನಲ್ಲಿ 7 ವಿಕೆಟ್‌ಗಳಿಂದ ಜಯ ಸಾಧಿಸಿದೆ.

ಮನೀಶ್ ಪಾಂಡೆ ನಾಯಕತ್ವದ ಭಾರತ ‘ಎ’ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ‘ಎ’ ವಿರುದ್ಧ ಶರಣಾಗಿತ್ತು. ಅಫ್ಘಾನಿಸ್ತಾನದ ವಿರುದ್ಧ ಟೂರ್ನಿಯ 2ನೆ ಪಂದ್ಯದಲ್ಲಿ ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತ ‘ಎ’ ತಂಡ ಅಫ್ಘಾನಿಸ್ತಾನ ತಂಡವನ್ನು 40.5 ಓವರ್‌ಗಳಲ್ಲಿ ಕೇವಲ 149 ರನ್‌ಗೆ ಆಲೌಟ್ ಮಾಡಿತು. ಅಕ್ಷರ್ ಪಟೇಲ್ 6 ಓವರ್‌ಗಳಲ್ಲಿ 33 ರನ್‌ಗೆ 3 ವಿಕೆಟ್ ಕಬಳಿಸಿದರು. ತಮಿಳುನಾಡಿನ ಆಲ್‌ರೌಂಡರ್ ವಿಜಯ್ ಶಂಕರ್ 7 ಓವರ್‌ಗಳಲ್ಲಿ 24 ರನ್‌ಗೆ 3 ವಿಕೆಟ್ ಪಡೆದರು. ಲೆಗ್-ಸ್ಪಿನ್ನರ್ ಯುಝ್ವೇಂದ್ರ ಚಾಹಲ್ ಪೂರ್ತಿ 10 ಓವರ್ ಬೌಲಿಂಗ್ ಮಾಡಿ 42 ರನ್‌ಗೆ 2 ವಿಕೆಟ್ ಪಡೆದಿದ್ದಾರೆ.

 ಗೆಲುವಿಗೆ ಸುಲಭ ಸವಾಲು ಪಡೆದಿದ್ದ ಭಾರತ 30.4 ಓವರ್‌ಗಳಲ್ಲಿ ಗುರಿ ತಲುಪಿತು. ಇನಿಂಗ್ಸ್ ಆರಂಭಿಸಿದ ಕರುಣ್ ನಾಯರ್ 83 ಎಸೆತಗಳಲ್ಲಿ 57 ರನ್ ಗಳಿಸಿದರೆ, ನಾಯಕ ಪಾಂಡೆ 52 ಎಸೆತಗಳಲ್ಲಿ ಅಜೇಯ 41 ರನ್ ಕಲೆ ಹಾಕಿದರು. ಈ ಜೋಡಿ 3ನೆ ವಿಕೆಟ್‌ಗೆ 67 ರನ್ ಜೊತೆಯಾಟ ನಡೆಸಿ ತಂಡಕ್ಕೆ ಸುಲಭ ಗೆಲುವು ತಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News