×
Ad

ವಿಶ್ವ ಈಜು ಚಾಂಪಿಯನ್‌ಶಿಪ್ : ಏಳು ಚಿನ್ನದೊಂದಿಗೆ ಫೆಲ್ಪ್ಸ್ ದಾಖಲೆ ಸರಿಗಟ್ಟಿದ ಡ್ರೆಸೆಲ್

Update: 2017-07-31 23:28 IST

ಬುಡಾಪೆಸ್ಟ್, ಜು.31: ಅಮೆರಿಕದ 21ರ ಹರೆಯದ ಯುವ ಈಜುಗಾರ ಕ್ಯಾಲೆಬ್ ರೆಮೆಲ್ ಡ್ರೆಸೆಲ್ ಅವರು ಇಲ್ಲಿ ರವಿವಾರ ಮುಕ್ತಾಯಗೊಂಡ ಫಿನಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 7 ಚಿನ್ನದ ಪದಕಗಳನ್ನು ಬಾಚಿಕೊಳ್ಳುವುದರೊಂದಿಗೆ ಅಮೆರಿಕದ ಈಜು ಕೊಳದ ‘ಚಿನ್ನದ ಮೀನು’ ಖ್ಯಾತಿಯ ಮೈಕಲ್ ಫೆಲ್ಪ್ಸ್ ಸಾಧನೆೆಯನ್ನು ಸರಿಗಟ್ಟಿದರು. ಈ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

  ಮೆಲ್ಬೋರ್ನ್‌ನಲ್ಲಿ 2007ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೈಕಲ್ ಫೆಲ್ಪ್ಸ್ ಏಳು ಚಿನ್ನ ಪಡೆದಿದ್ದರು. ಹತ್ತು ವರ್ಷಗಳ ಬಳಿಕ ಅವರ ದಾಖಲೆಯನ್ನು ಅವರ ದೇಶದ ಕ್ಯಾಲೆಬ್ ರೆಮೆಲ್ ಡ್ರೆಸೆಲ್ ಸರಿಗಟ್ಟಿದರು.
   
ಫ್ಲೋರಿಡಾ ವಿವಿ ವಿದ್ಯಾರ್ಥಿ ಡ್ರೆಸೆಲ್ ವಿಶ್ವ ಚಾಂಪಿಯನ್‌ಶಿಪ್‌ನ ಏಳನೆ ದಿನವಾಗಿದ್ದ ಶನಿವಾರ ಮೂರು ಚಿನ್ನ ಗೆದ್ದುಕೊಂಡು ದಾಖಲೆ ನಿರ್ಮಿಸಿದ್ದರು. ಕೇವಲ 98 ನಿಮಿಷಗಳಲ್ಲಿ 50 ಮೀಟರ್ ಫ್ರೀಸ್ಟೈಲ್, 100 ಮೀಟರ್ ಬಟರ್‌ಫ್ಲೈ ಮತ್ತು ಮಿಕ್ಸೆಡ್ 4x 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಚಿನ್ನ ಪಡೆದು ಒಂದೇ ದಿನ ಹ್ಯಾಟ್ರಿಕ್ ಚಿನ್ನದ ಸಾಧನೆ ಮಾಡಿದ ಮೊದಲ ಈಜುಪಟು ಎನಿಸಿಕೊಂಡಿದ್ದರು.
ಎಂಟನೆ ದಿನವಾಗಿರುವ ರವಿವಾರ ಚಿನ್ನದ ಬೇಟೆಯನ್ನು ಮುಂದುವರಿಸಿದ್ದ ಡ್ರೆಸೆಲ್ 4x100 ಮೀಟರ್ ಮಿಡ್ಲೆಯಲ್ಲಿ ಚಿನ್ನ ಪಡೆದು ಪದಕಗಳ ಸಂಖ್ಯೆಯನ್ನು 7ಕ್ಕೆ ಏರಿಸಿದರು.

 ಜುಲೈ 23ರಂದು ಕೂಟದ ಮೊದಲ ದಿನ 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಚಿನ್ನ ,ಆದರೆ ಎರಡನೆ ದಿನ 0.05 ಸೆಕೆಂಡ್‌ಗಳ ಅಂತರದಲ್ಲಿ ಡ್ರೆಸೆಲ್ 50 ಮೀಟರ್ ಬಟರ್‌ಫ್ಲೈನಲ್ಲಿ ಪದಕ ವಂಚಿತಗೊಂಡಿದ್ದರು. ನಾಲ್ಕನೆ ದಿನ 4x 100 ಮೀಟರ್ ಮಿಡ್ಲೆ ರಿಲೇಯಲ್ಲಿ ಚಿನ್ನ ಮತ್ತು ಐದನೆ ದಿನ 4x  100 ಮೀಟರ್ ಮಿಕ್ಸೆಡ್ ಫ್ರೀ ಸ್ಟ್ರೈಲ್ ರಿಲೇಯ ಫೈನಲ್‌ನಲ್ಲಿ ಚಿನ್ನ ಪಡೆದರು.

ಮಹಿಳಾ ವಿಭಾಗದಲ್ಲಿ ಅಮೆರಿಕದ ಸಿಮೊನ್ ಮ್ಯಾನುಲ್ 4x100 ಮಿಡ್ಲೆ ರಿಲೇಯಲ್ಲಿ (3:51.55) ಅಗ್ರ ಸ್ಥಾನದೊಂದಿಗೆ 2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಉತ್ತಮಪಡಿಸಿದರು. ಅವರು ಐದು ಚಿನ್ನದ ಪದಕಗಳನ್ನ್ನು ಬಾಚಿಕೊಂಡರು. ಲಿಲ್ಲಿ ಕಿಂಗ್ 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ (29.40 ಸೆ.) ವಿಶ್ವ ದಾಖಲೆಯೊಂದಿಗೆ ಚಿನ್ನ ಪಡೆದರು. ಅವರು ಈ ಕೂಟದಲ್ಲಿ 4 ಚಿನ್ನ ಕಲೆ ಹಾಕಿದರು. ಅಮೆರಿಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 46 ಪದಕ(21 ಚಿನ್ನ, 12 ಬೆಳ್ಳಿ ಮತ್ತು 13) ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News