ತಾಯಿಯ ರಾಷ್ಟ್ರೀಯತೆ ಟೀಕಿಸಿದವರ ವಿರುದ್ಧ ಜ್ವಾಲಾ ಗುಟ್ಟಾ ಕಿಡಿ

Update: 2017-07-31 18:12 GMT

ಹೊಸದಿಲ್ಲಿ, ಜು.31: ಸಾಮಾಜಿಕ ಜಾಲತಾಣದಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಹೆಚ್ಚು ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ವಿವಾದವನ್ನು ಸೃಷ್ಟಿಸುವವರ ಬಾಯಿ ಮುಚ್ಚಿ ಸಲು ಜ್ವಾಲಾ ಯಾವಾಗಲೂ ಎತ್ತಿದ ಕೈ. ‘‘ನಿಮ್ಮ ತಾಯಿ ಚೀನಾದವರು. ಹಾಗಾಗಿ ಪ್ರತಿಬಾರಿಯೂ ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡುತ್ತಾರೆ. ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗಾಗಿ ದಣಿವರಿಯದೇ ಕೆಲಸ ಮಾಡುತ್ತಿದ್ದಾರೆ’’ ಸಿದ್ದು ಎಂಬಾತ ಅರ್ಜುನ ಪ್ರಶಸ್ತಿ ವಿಜೇತೆ ಜ್ವಾಲಾ ಗುಟ್ಟಾರ ತಾಯಿ ಯೆಲನಾ ಗುಟ್ಟಾರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದ. ಇದಕ್ಕೆ ತಕ್ಷಣವೇ ಟ್ವೀಟ್ ಮಾಡಿದ ಜ್ವಾಲಾ, ‘‘ಅಭಿಪ್ರಾಯ ವ್ಯಕ್ತಪಡಿಸುವ ಮೊದಲು ಎರಡು ಬಾರಿ ಯೋಚಿಸಬೇಕು. ರಾಷ್ಟ್ರೀಯತೆ ವಿಷಯದಲ್ಲಿ ನಮ್ಮ ಹೆತ್ತವರನ್ನು ಎಳೆದು ತರುವುದು ಸರಿಯಲ್ಲ. ನಾನು ನಿನ್ನ ಮೇಲಿನ ಎಲ್ಲ ಗೌರವ ಕಳೆದುಕೊಂಡಿದ್ದೇನೆ. ಹಾಗಾಗಿ ನೀನು ನನ್ನಿಂದ ಯಾವ ಉತ್ತರ ಪಡೆಯಲು ಸಾಧ್ಯವಿಲ್ಲ. ನಿನಗೆ ಏನಾದರೂ ಪ್ರಶ್ನೆ ಕೇಳುವುದಿದ್ದರೆ ನೇರವಾಗಿ ಕೇಳು. ನನಗೆ ಭಾರತೀಯಳೆಂಬ ಹೆಮ್ಮೆಯಿದೆ’’ ಎಂದು ಟ್ವೀಟ್ ಮಾಡಿದ್ದರು.

ಜ್ವಾಲಾರ ತಾಯಿ ಚೀನಾದ ಟಿಯಾನ್‌ಜಿನ್‌ನಲ್ಲಿ ಜನಿಸಿದ್ದು ಹೈದರಾಬಾದ್‌ನ ಕ್ರಾಂತಿ ಗುಟ್ಟಾ ಎಂಬವರನ್ನು ವಿವಾಹವಾಗಿದ್ದರು. ಈಗ ಭಾರತ-ಚೀನಾ ಗಡಿ ವಿಷಯದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಚೀನಾ ಮೂಲದ ಜ್ವಾಲಾರ ತಾಯಿಯನ್ನು ಗುರಿಯಾಗಿರಿಸಿ ಕೆಲವರು ಟ್ವೀಟ್ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News