×
Ad

ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಲು ರಘುನಾಥ್ ಚಿಂತನೆ

Update: 2017-07-31 23:51 IST

ಚೆನ್ನೈ, ಜು.31: ಸರಿಯಾಗಿ ಒಂದು ವರ್ಷದ ಹಿಂದೆ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಭಾರತ ತಂಡದ ಪ್ರಮುಖ ಆಟಗಾರನಾಗಿದ್ದ ಕನ್ನಡಿಗ ವಿ.ಆರ್. ರಘುನಾಥ್ ಕಳೆದ ಕೆಲವು ತಿಂಗಳಿಂದ ತಂಡದಿಂದ ದೂರ ಉಳಿದಿದ್ದು, ಶೀಘ್ರವೇ ವೃತ್ತಿಜೀವನಕ್ಕೆ ತೆರೆ ಎಳೆಯಲು ಗಂಭೀರ ಚಿಂತನೆ ನಡೆಸುತ್ತಿದ್ದಾರೆ.

‘‘ಮುಂದಿನ ಕೆಲವೇ ತಿಂಗಳುಗಳಲ್ಲಿ ನಾನು ಅಂತಾರಾಷ್ಟ್ರೀಯ ಹಾಕಿ ಪಂದ್ಯದಿಂದ ನಿವೃತ್ತಿಯಾಗುವೆ. ಯುವ ಆಟಗಾರರ ಉಪಸ್ಥಿತಿಯಲ್ಲಿ ಭಾರತ ಸರಿಯಾದ ಪಥದಲ್ಲಿ ಸಾಗುತ್ತಿದೆ. ನನ್ನ ಸೇವೆಯಿಂದ ತಂಡ ವಂಚಿತವಾಗಿಲ್ಲ. ಕೋಚ್ ರೊಲ್ಯಾಂಟ್ ಒಲ್ಟಮನ್ಸ್‌ರೊಂದಿಗೆ ನಾನು ಮಾತನಾಡಿಲ್ಲ. ಪ್ರಬುದ್ಧ ಆಟಗಾರನಾಗಿ ನನಗೆ ಎಲ್ಲವೂ ಅರ್ಥವಾಗುತ್ತದೆ. ನಿವೃತ್ತಿಯಾಗಲು ಮಾನಸಿಕವಾಗಿ ಸಂಪೂರ್ಣ ಸಜ್ಜಾಗಿದ್ದೇನೆ’’ ಎಂದು ‘ಕೊಡಗಿನ ಕುವರ’ ರಘುನಾಥ್ ಹೇಳಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ 28ರ ಹರೆಯದ ರಘುನಾಥ್ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆ ನಂತರ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ತಂಡದಿಂದ ದೂರ ಉಳಿದಿದ್ದರು.

‘‘ವಿರಾಮ ಪಡೆದಿರುವುದು ನನ್ನ ವೈಯಕ್ತಿಕ ನಿರ್ಧಾರವಾಗಿತ್ತು. ನಾನು ಭಾರತದ ಪರ ಒಂದು ದಶಕಕ್ಕೂ ಅಧಿಕ ಕಾಲ ಆಡಿದ್ದೇನೆ. ವರ್ಷದಲ್ಲಿ 8-10 ತಿಂಗಳು ಬಿಡುವು ಸಿಗುತ್ತಿರಲಿಲ್ಲ. ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸಿದ್ದೆ. ಕಳೆದ ವರ್ಷ ಒಲಿಂಪಿಕ್ಸ್‌ನ ಬಳಿಕ ವಿಶ್ರಾಂತಿ ಪಡೆಯಲು ಯೋಚಿಸಿದ್ದೆ’’ ಎಂದು ಪ್ರಸ್ತುತ ಬೆಂಗಳೂರು ಹಾಕಿ ಅಸೋಸಿಯೇಶನ್ ಪರ ಆಡುತ್ತಿರುವ ರಘುನಾಥ್ ಹೇಳಿದ್ದಾರೆ.

‘‘ರಾಷ್ಟ್ರೀಯ ತಂಡದಲ್ಲಿ ತನಗೆ ಸಾಧ್ಯವಿರುವ ಕೊಡುಗೆ ನೀಡಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೀರ್ಘ ಸಮಯ ಆಡಿದ್ದೇನೆ. ಯುವ ಆಟಗಾರರೊಂದಿಗೆ ದೇಶೀಯ ಹಾಕಿ ಹಾಗೂ ವಿದೇಶಿ ಲೀಗ್‌ಗಳಲ್ಲಿ ಆಡಲು ಇದು ಸರಿಯಾದ ಸಮಯವೆಂದು ಭಾವಿಸಿದ್ದೇನೆ. ಒಂದು ವೇಳೆ ನಾನು ಹಾಕಿಯಲ್ಲಿ ಮುಂದುವರಿದರೆ ಮುಂಬರುವ 2020ರ ಒಲಿಂಪಿಕ್ಸ್ ತನಕ ಆಡುವ ಬಯಕೆಯಿದೆ’’ ಎಂದು ರಘುನಾಥ್ ಹೇಳಿದರು.
ಒಂದು ದಶಕದ ಹಿಂದೆ ಭಾರತದ ಪರ ಚೊಚ್ಚಲ ಪಂದ್ಯವನ್ನು ಆಡಿದ್ದ ರಘುನಾಥ್ ಎರಡು ಒಲಿಂಪಿಕ್ಸ್ ಹಾಗೂ 2014ರಲ್ಲಿ ಹಾಲೆಂಡ್‌ನಲ್ಲಿ ನಡೆದಿದ್ದ ಹಾಕಿ ವಿಶ್ವಕಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News