×
Ad

ಇಂದಿನಿಂದ ನ್ಯೂಝಿಲೆಂಡ್ ಗ್ರಾನ್‌ಪ್ರಿ ಆರಂಭ

Update: 2017-07-31 23:57 IST

ಆಕ್ಲೆಂಡ್, ಜು.31: ನೂತನ ಯುಎಸ್ ಓಪನ್ ಚಾಂಪಿಯನ್ ಎಚ್.ಎಸ್. ಪ್ರಣಯ್ ಮಂಗಳವಾರ ಇಲ್ಲಿ ಆರಂಭವಾಗಲಿರುವ 120,000 ಯುಎಸ್ ಡಾಲರ್ ಬಹುಮಾನ ಮೊತ್ತದ ನ್ಯೂಝಿಲೆಂಡ್ ಜಿಪಿ ಗೋಲ್ಡ್ ಟೂರ್ನಿಯ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸುವತ್ತ ಚಿತ್ತವಿರಿಸಿದ್ದಾರೆ.

ವೃತ್ತಿಜೀವನದುದ್ದಕ್ಕೂ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಣಯ್ ಯುಎಸ್ ಓಪನ್ ಜಯಿಸುವ ಮೂಲಕ ಒಂದು ವರ್ಷ, ನಾಲ್ಕು ತಿಂಗಳಿಂದ ಎದುರಿಸುತ್ತಿದ್ದ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದರು. ಕಳೆದ ವರ್ಷದ ಮಾರ್ಚ್‌ನಲ್ಲಿ ಕೊನೆಯ ಬಾರಿ ಸ್ವಿಸ್ ಓಪನ್ ಪ್ರಶಸ್ತಿ ಜಯಿಸಿದ್ದರು.

ಯುಎಸ್ ಓಪನ್ ಪ್ರಶಸ್ತಿ ಜಯಿಸಿದ ಬಳಿಕ ಪ್ರಣಯ್ ವಿಶ್ವ ರ್ಯಾಂಕಿಂಗ್‌ನಲ್ಲಿ 17ನೆ ಸ್ಥಾನಕ್ಕೇರಿದ್ದಾರೆ. ನ್ಯೂಝಿಲೆಂಡ್ ಓಪನ್‌ನ ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಶೆಸಾರ್ ಹಿರೇನ್ ರುಸ್ಟಾವಿಟೊರನ್ನು ಎದುರಿಸಲಿದ್ದಾರೆ. 2015ರ ಅಕ್ಟೋಬರ್‌ನಿಂದ ಗಾಯದ ಸಮಸ್ಯೆ ಎದುರಿಸುತ್ತಿದ್ದ ಕಶ್ಯಪ್ ಎರಡು ವರ್ಷಗಳ ಬಳಿಕ ಯುಎಸ್ ಓಪನ್‌ನಲ್ಲಿ ಫೈನಲ್‌ಗೆ ತಲುಪುವ ಮೂಲಕ ಕಳಪೆ ಫಾರ್ಮ್‌ನಿಂದ ಹೊರ ಬಂದಿದ್ದಾರೆ.

ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನಲ್ಲಿ 12 ಸ್ಥಾನ ಮೇಲಕ್ಕೇರಿ 47ನೆ ಸ್ಥಾನ ಪಡೆದಿರುವ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ಇಂಡೋನೇಷ್ಯಾದ ಡಿಯೊನಿಸಿಯಸ್ ಹಾಯೊಮ್ ರಂಬಕಾರನ್ನು ಎದುರಿಸಲಿದ್ದಾರೆ.

ಮುಂದಿನ ತಿಂಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲಿರುವ ಅಜಯ್ ಜಯರಾಮ್ ಮೊದಲ ಸುತ್ತಿನಲ್ಲಿ ಚೈನೀಸ್ ತೈಪೆಯ ಚಿಯಾ ಹ್ಯೂಂಗ್ ಲೂ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಕಳೆದ ವರ್ಷ ಚೈನೀಸ್ ತೈಪೆ ಜಿಪಿ ಗೋಲ್ಡ್ ಪ್ರಶಸ್ತಿಯನ್ನು ಜಯಿಸಿದ್ದ ಮಾಜಿ ನ್ಯಾಶನಲ್ ಚಾಂಪಿಯನ್ ಸೌರಭ್ ವರ್ಮ ಆಸ್ಟ್ರೇಲಿಯದ ನಥಾನ್ ತಾಂಗ್‌ರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ತನ್ವಿ ಲಾಡ್ ಮಲೇಷ್ಯಾದ ಮೂರನೆ ಶ್ರೇಯಾಂಕದ ಗೊ ಜಿನ್ ವೀ ಅವರನ್ನು ಎದುರಿಸಲಿದ್ದಾರೆ. ಭಾರತದ ಯುವ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮೊದಲ ಸುತ್ತಿನಲ್ಲಿ ಕ್ವಾಲಿಫೈಯರ್‌ರನ್ನು ಎದುರಿಸಲಿದೆ. ಲಾಗೊಸ್ ಇಂಟರ್‌ನ್ಯಾಶನಲ್ ಚಾಂಪಿಯನ್ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಚೀನಾದ ಹೀ ಜಿಟಿಂಗ್ ಹಾಗೂ ಟಾನ್ ಕ್ವಿಯಾಂಗ್‌ರನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News