ಪ್ರಣಯ್, ಕಶ್ಯಪ್ ಪ್ರಿ-ಕ್ವಾರ್ಟರ್‌ಫೈನಲ್‌ಗೆ

Update: 2017-08-02 18:29 GMT

ಆಕ್ಲೆಂಡ್, ಆ.2: ನ್ಯೂಝಿಲೆಂಡ್ ಓಪನ್ ಗ್ರಾನ್‌ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ ಎಚ್.ಎಸ್.ಪ್ರಣಯ್ ಹಾಗೂ ಪಾರುಪಲ್ಲಿ ಕಶ್ಯಪ್ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ.

ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 24ರ ಹರೆಯದ ಪ್ರಣಯ್ ಇಂಡೋನೇಷ್ಯದ ಫಿರ್ಮನ್ ಅಬ್ದುಲ್ ಖೊಲಿಕ್‌ರನ್ನು 23-21, 21-18 ಗೇಮ್‌ಗಳ ಅಂತರದಿಂದ ಮಣಿಸಿದರು.

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ನ್ಯೂಝಿಲೆಂಡ್‌ನ ಆಸ್ಕರ್ ಗುಯೊರನ್ನು 21-9, 21-8 ಗೇಮ್‌ಗಳ ಅಂತರದಿಂದ ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದರು. ಪ್ರಣಯ್ ಮುಂದಿನ ಸುತ್ತಿನಲ್ಲಿ 10ನೆ ಶ್ರೇಯಾಂಕದ ಹಾಂಕಾಂಗ್‌ನ ವೀ ನ್ಯಾನ್, 15ನೆ ಶ್ರೇಯಾಂಕದ ಕಶ್ಯಪ್ ಅವರು ಸಹ ಆಟಗಾರ ಹಾಗೂ ಏಳನೆ ಶ್ರೇಯಾಂಕದ ಸೌರಭ್ ವರ್ಮರನ್ನು ಎದುರಿಸಲಿದ್ದಾರೆ.

  ಏಳನೆ ಶ್ರೇಯಾಂಕದ ಸೌರಭ್ ಇಂಡೋನೇಷ್ಯಾದ ಹೆನ್ರಿಖೋ ವಿಬೊವೊರನ್ನು 21-16, 21-16 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ. 16ನೆ ಶ್ರೇಯಾಂಕದ ಸಿರಿಲ್ ವರ್ಮ ಇಂಡೋನೇಷ್ಯಾದ ಇನ್ನೋರ್ವ ಆಟಗಾರ ಸಪುತ್ರಾ ವಿಕಿ ಅಂಗಾರನ್ನು 21-14, 21-16 ಗೇಮ್‌ಗಳ ಅಂತರದಿಂದ ಮಣಿಸುವ ಮೂಲಕ ಮುಂದಿನ ಸುತ್ತಿಗೇರಿದ್ದಾರೆ.

 ಯುವ ಶಟ್ಲರ್‌ಗಳಾದ ಸಾಹಿಲ್ ಸಿಪಾನಿ ಹಾಗೂ ನೀರಜ್ ವಶಿಷ್ಟ ದ್ವಿತೀಯ ಸುತ್ತಿನಲ್ಲಿ ನೇರ ಗೇಮ್‌ಗಳಿಂದ ಸೋಲುವುದರೊಂದಿಗೆ ಟೂರ್ನಿಯಿಂದ ಹೊರ ನಡೆದಿದ್ದಾರೆ. ಸಾಹಿಲ್ ಚೈನೀಸ್ ತೈಪೆಯ ಲಿನ್ ಯೂ ಸಿಯೆನ್ ವಿರುದ್ಧ 9-21, 8-21 ರಿಂದ ಶರಣಾದರೆ, ನೀರಜ್ ಆಸ್ಟ್ರೇಲಿಯದ ಆ್ಯಂಥೊನಿ ಜೊಯ್ ವಿರುದ್ಧ 16-21, 13-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News