50ನೆ ಟೆಸ್ಟ್‌ನಲ್ಲಿ ಪೂಜಾರ 13ನೆ ಶತಕ

Update: 2017-08-03 18:24 GMT

ಕೊಲಂಬೊ, ಆ.3: ಐವತ್ತನೆ ಟೆಸ್ಟ್ ಆಡುತ್ತಿರುವ ಭಾರತದ ಅಗ್ರ ಸರದಿಯ ದಾಂಡಿಗ ಚೇತೇಶ್ವರ ಪೂಜಾರ ಶ್ರೀಲಂಕಾ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಶತಕ ಗಳಿಸುವ ಮೂಲಕ ತನ್ನ ಟೆಸ್ಟ್ ಶತಕಗಳ ಸಂಖ್ಯೆಯನ್ನು 13ಕ್ಕೆ ಏರಿಸಿದರು.

 ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಶತಕ (153) ದಾಖಲಿಸಿದ್ದ ಪೂಜಾರ ತನ್ನ ಅಪೂರ್ವ ಫಾರ್ಮ್‌ನ್ನು ಎರಡನೆ ಟೆಸ್ಟ್‌ನಲ್ಲೂ ಮುಂದುವರಿಸಿ ದರು. 164 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 13ನೆ ಶತಕ ದಾಖಲಿಸಿದ ಪೂಜಾರ ಸರಣಿಯಲ್ಲಿ ಸತತ ಎರಡನೆ ಶತಕ ಗಳಿಸಿದರು.
 
 29ರ ಹರೆಯದ ಪೂಜಾರ ಟೆಸ್ಟ್‌ನಲ್ಲಿ ವೇಗವಾಗಿ 4,000 ರನ್ ಪೂರ್ಣಗೊಳಿಸಿದ್ದಾರೆ. ಪೂಜಾರ 34 ರನ್ ಗಳಿಸುತ್ತಿದ್ದಂತೆ ಈ ಮೈಲುಗಲ್ಲು ತಲುಪಿದರು. ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್, ಕಪಿಲ್ ದೇವ್, ಸುನೀಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್ ಮತ್ತು ಪಾಲಿ ಉಮ್ರಿಗಾರ್ ತಮ್ಮ 50ನೆ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದರು. ಇದರೊಂದಿಗೆ ಪೂಜಾರ 50ನೆ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ ಭಾರತದ ಏಳನೆ ದಾಂಡಿಗ ಎನಿಸಿಕೊಂಡರು. ಪೂಜಾರ 84ನೆ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.

ಆಸ್ಟ್ರೇಲಿಯದ ಗ್ರೇಟ್ ಡಾನ್ ಬ್ರಾಡ್ಮನ್ 48 ಇನಿಂಗ್ಸ್‌ನಲ್ಲಿ ಮತ್ತು ವೆಸ್ಟ್‌ಇಂಡೀಸ್‌ನ ಹರ್ಬರ್ಟ್ ಸಟ್‌ಕ್ಲಿಫ್ 68 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲನ್ನು ಮುಟ್ಟಿದ್ದರು. ಪೂಜಾರ 2010ರಲ್ಲಿ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ 89 ಎಸೆತಗಳಲ್ಲಿ 72 ರನ್ ಗಳಿಸಿ ಭಾರತದ ಗೆಲುವಿಗೆ ನೆರವಾಗಿದ್ದರು. ಬಳಿಕ ಗಾಯದ ಸಮಸ್ಯೆಯಿಂದಾಗಿ 20 ತಿಂಗಳುಗಳ ಕಾಲ ತಂಡದಿಂದ ಪೂಜಾರ ದೂರ ಉಳಿದಿದ್ದರು. ರಾಹುಲ್ ದ್ರಾವಿಡ್ ನಿವೃತ್ತಿಯ ಬಳಿಕ ನಂ.3 ನೆ ಕ್ರಮಾಂಕದಲ್ಲಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡ ಪೂಜಾರ ನ್ಯೂಝಿಲೆಂಡ್ ವಿರುದ್ಧ 159 ರನ್ ಮತ್ತು ಇಂಗ್ಲೆಂಡ್ ವಿರುದ್ಧ 206 ರನ್ ಗಳಿಸಿ ಮಿಂಚಿದ್ದರು.

 2013ರಲ್ಲಿ ಆಸ್ಟ್ರೇಲಿಯ ವಿರುದ್ಧ 204 ರನ್ ದಾಖಲಿಸಿ ಟೆಸ್ಟ್‌ನಲ್ಲಿ ವೇಗವಾಗಿ 1,000 ರನ್ ಪೂರೈಸಿದ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದರು. 2017ರ ಆರಂಭದಲ್ಲಿ ಆಸ್ಟ್ರೇಲಿಯದ ವಿರುದ್ದ ಮೂರನೆ ದ್ವಿಶತಕ ದಾಖಲಿಸಿದ್ದರು. ಇದರೊಂದಿಗೆ ಅವರು 2017ರಲ್ಲಿ ಗರಿಷ್ಠ ರನ್ ದಾಖಲಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News