ಭಾರತದ ಅಭಿಯಾನ ಅಂತ್ಯ

Update: 2017-08-04 18:09 GMT

ಆಕ್ಲಂಡ್, ಆ 4: ಎಚ್.ಎಸ್. ಪ್ರಣಯ್ ಹಾಗೂ ಸೌರಭ್ ವರ್ಮ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸುವುದರೊಂದಿಗೆ ನ್ಯೂಝಿಲೆಂಡ್ ಓಪನ್ ಜಿಪಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಶುಕ್ರವಾರ ಒಂದು ಗಂಟೆ ಹಾಗೂ ಆರು ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ನಾಲ್ಕನೆ ಶ್ರೇಯಾಂಕದ ಪ್ರಣಯ್ ಚೈನೀಸ್ ತೈಪೆಯ ಲಿನ್ ಯೂ ಸಿಯೆನ್ ವಿರುದ್ಧ ಕಠಿಣ ಹೋರಾಟ ನೀಡಿದರೂ 10-21, 22-20, 21-23 ಗೇಮ್‌ಗಳ ಅಂತರದಿಂದ ಶರಣಾದರು. ಏಳನೆ ಶ್ರೇಯಾಂಕದ ಸೌರಭ್ ವರ್ಮ ಕೇವಲ 42 ನಿಮಿಷಗಳಲ್ಲಿ ಕೊನೆಗೊಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೇಯಾಂಕರಹಿತ ಹಾಂಕಾಂಗ್‌ನ ಲೀ ಚೆಯುಕ್ ಯೂ ವಿರುದ್ಧ 19-21, 16-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಪ್ರಣಯ್ ಹಾಗೂ ಸಿಯೆನ್ ನಡುವೆ ನಡೆದ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ಒಂದು ಹಂತದಲ್ಲಿ 8-8 ರಿಂದ ಸಮಬಲ ಸಾಧಿಸಿದ್ದರು. ಸತತ 10 ಅಂಕ ಬಾಚಿಕೊಂಡ ತೈಪೆಯ ಆಟಗಾರ ಮೊದಲ ಗೇಮ್‌ನ್ನು 21-10 ರಿಂದ ಗೆದ್ದುಕೊಂಡರು.

ಪ್ರಣಯ್ ಎರಡನೆ ಗೇಮ್‌ನಲ್ಲಿ 13-8 ರಿಂದ ಮುನ್ನಡೆಯಲ್ಲಿದ್ದರು. ಆದರೆ ತಿರುಗೇಟು ನೀಡಿದ ಸಿಯೆನ್ 17-17ರಿಂದ ಸಮಬಲಗೊಳಿಸಿದರು. ಸತತ ಎರಡು ಅಂಕ ಗಳಿಸಿದ ಪ್ರಣಯ್ 22-20 ರಿಂದ ಎರಡನೆ ಗೇಮ್‌ನ್ನು ಗೆದ್ದುಕೊಂಡರು.

 ಮೂರನೆ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಇಬ್ಬರೂ ಆಟಗಾರರು ತೀವ್ರ ಹೋರಾಟ ನಡೆಸಿದರು.ಇಬ್ಬರು ಆಟಗಾರರು 21-21 ರಿಂದ ಸಮಬಲ ಸಾಧಿಸಿದರು. ಎರಡು ನಿರ್ಣಾಯಕ ಅಂಕ ಗಳಿಸಲು ಸಫಲವಾದ ತೈಪೆಯ ಶಟ್ಲರ್ 23-21 ರಿಂದ ಮೂರನೆ ಸೆಟ್‌ನ್ನು ಜಯಿಸಿ ಸೆಮಿ ಫೈನಲ್‌ಗೆ ತೇರ್ಗಡೆಯಾದರು.
ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸಹ ಆಟಗಾರ ಪಾರುಪಲ್ಲಿ ಕಶ್ಯಪ್‌ರನ್ನು ಮಣಿಸಿದ್ದ ಸೌರಭ್ ವರ್ಮ ಹಾಂಕಾಂಗ್ ಆಟಗಾರನ ವಿರುದ್ಧ ನೇರ ಗೇಮ್‌ಗಳಿಂದ ಸೋಲನುಭವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News