ಸರಣಿಯಿಂದ ಶ್ರೀಲಂಕಾ ವೇಗಿ ಪ್ರದೀಪ್ ಔಟ್

Update: 2017-08-04 18:13 GMT

ಕೊಲಂಬೊ, ಆ.4: ಸ್ನಾಯು ಸೆಳೆತದಿಂದ ಬಳಲುತ್ತಿರುವ ವೇಗದ ಬೌಲರ್ ನುವಾನ್ ಪ್ರದೀಪ್ ಪ್ರಸ್ತುತ ನಡೆಯುತ್ತಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದಲೇ ಹೊರ ನಡೆದಿದ್ದಾರೆ. ಈ ಬೆಳವಣಿಗೆಯು ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.

 ಪ್ರದೀಪ್ ಅನುಪಸ್ಥಿತಿಯಲ್ಲಿ ಶ್ರೀಲಂಕಾ ತಂಡ ಎರಡನೆ ಟೆಸ್ಟ್‌ನಲ್ಲಿ ಓರ್ವ ಮಧ್ಯಮ ವೇಗದ ಬೌಲರ್ ಡಿ. ಕರುಣರತ್ನೆ ಅವರೊಂದಿಗೆ ಹೋರಾಟ ಮುಂದುವರಿಸಬೇಕಾಗಿದೆ. ಪ್ರದೀಪ್ ಮೊದಲ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದರು. ಎರಡನೆ ಟೆಸ್ಟ್‌ನ 2ನೆ ದಿನವಾದ ಗುರುವಾರ ಕೇವಲ ನಾಲ್ಕು ಎಸೆತಗಳನ್ನು ಎಸೆದಿದ್ದ ಪ್ರದೀಪ್ ಮತ್ತೆ ಮೈದಾನಕ್ಕೆ ಇಳಿಯಲಿಲ್ಲ. ''ನುವಾನ್ ಪ್ರದೀಪ್ ಒಂದರಿಂದ ಎರಡು ತಿಂಗಳು ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ನಾನು ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದರೂ, ಬೌಲರ್ ಆಗಿ ವೃತ್ತಿಜೀವನ ಆರಂಭಿಸಿದ್ದೆ. ನನ್ನಲ್ಲಿ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಲು ಸೂಚಿಸಿದರೆ ಖಂಡಿತವಾಗಿಯೂ ಬೌಲಿಂಗ್ ಮಾಡುವೆ''ಎಂದು ಕರುಣರತ್ನೆ ಹೇಳಿದ್ದಾರೆ. ಪ್ರದೀಪ್ ಎರಡನೆ ಟೆಸ್ಟ್‌ನ ಮೊದಲ ದಿನ ಕೇವಲ 17 ಓವರ್‌ಗಳ ಬೌಲಿಂಗ್ ಮಾಡಿದ್ದರು. ಸ್ನಾಯು ಸೆಳೆತದಿಂದಾಗಿ ಅವರು ಮೈದಾನವನ್ನು ತೊರೆದಿದ್ದರು. ಶ್ರೀಲಂಕಾ ತಂಡ ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದ ಕಂಗಾಲಾಗಿದೆ. ಆಲ್‌ರೌಂಡರ್ ಅಸೆಲಾ ಗುಣರತ್ನೆ ಗಾಲೆ ಟೆಸ್ಟ್ ನ ವೇಳೆ ಹೆಬ್ಬೆರಳ ಮುರಿತಕ್ಕೆ ಒಳಗಾಗಿ ಟೆಸ್ಟ್ ಸರಣಿಯಿಂದಲೇ ಹೊರ ನಡೆದಿದ್ದರು. ನಾಯಕ ದಿನೇಶ್ ಚಾಂಡಿಮಾಲ್ ಜ್ವರದಿಂದಾಗಿ ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಎರಡನೆ ಟೆಸ್ಟ್‌ಗೆ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News