ಮೂರನೆ ಟೆಸ್ಟ್‌ಗೆ ಜಡೇಜ ಅಮಾನತು
ಕೊಲಂಬೊ, ಆ.6: ಭಾರತದ ಆಲ್‌ರೌಂಡ್ ರವೀಂದ್ರ ಜಡೇಜ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿ 50 ಶೇ. ದಂಡ ಹಾಗೂ ಮೂರು ಋಣಾತ್ಮಕ ಅಂಕವನ್ನು ಗಳಿಸಿದ ಹಿನ್ನೆಲೆಯಲ್ಲಿ ಪಲ್ಲೆಕಲ್‌ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್‌ನಿಂದ ಅಮಾನತುಗೊಂಡಿದ್ದಾರೆ.
ಕಳೆದ ಎರಡು ವರ್ಷದಲ್ಲಿ ಜಡೇಜರ ಋಣಾತ್ಮಕ ಅಂಕ 6ಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಒಂದು ಪಂದ್ಯದಿಂದ ಅಮಾನತುಗೊಂಡಿದ್ದಾರೆ.
ಜಡೇಜ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟಗಾರನತ್ತ ಅಪಾಯಕಾರಿಯಾಗಿ ಚೆಂಡು ಎಸೆದು( ಅಥವಾ ಕ್ರಿಕೆಟ್ ಸಲಕರಣೆ, ನೀರಿನ ಬಾಟಲಿ) ಐಸಿಸಿ ನೀತಿ ಸಂಹಿತೆ 2.2.8ನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ನಾಲ್ಕನೆ ದಿನವಾದ ಶನಿವಾರ 58ನೆ ಓವರ್‌ನ ಕೊನೆಯ ಎಸೆತವನ್ನು ಬೌಲಿಂಗ್ ಮಾಡಿದ ಜಡೇಜ ಬಳಿಕ ಸ್ವತಹ ಫೀಲ್ಡಿಂಗ್ ಮಾಡಿ ಚೆಂಡನ್ನು ಶ್ರೀಲಂಕಾ ಬ್ಯಾಟ್ಸ್‌ಮನ್ ಕರುಣರತ್ನೆ ಅವರತ್ತ ಬಿಸಾಡಿದರು. ಜಡೇಜ ಬ್ಯಾಟ್ಸ್‌ಮನ್‌ನತ್ತ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಚೆಂಡನ್ನು ಎಸೆದಿದ್ದು, ಕರುಣರತ್ನೆ ಕೂದಲೆಳೆಯಿಂದ ಗಾಯವಾಗುವ ಅಪಾಯದಿಂದ ಪಾರಾದರು.
ಜಡೇಜ ಮ್ಯಾಚ್ ರೆಫ್ರಿ ರಿಚಿ ರಿಚರ್ಡ್‌ಸನ್ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಬ್ಯಾಟ್ಸ್‌ಮನ್‌ನತ್ತ ಚೆಂಡನ್ನು ಬಿಸಾಡಿದ ಜಡೇಜಗೆ 50 ಶೇ. ದಂಡ ವಿಧಿಸಲಾಗಿದೆ.
ಶ್ರೀಲಂಕಾ-ಭಾರತದ ನಡುವೆ ಮೂರನೆ ಟೆಸ್ಟ್ ಪಂದ್ಯ ಆಗಸ್ಟ್ 12 ರಿಂದ 16ರ ತನಕ ಪಲ್ಲೆಕಲ್‌ನಲ್ಲಿ ನಡೆಯಲಿದೆ.