ಬೋಲ್ಟ್ ಚಿನ್ನದ ವಿದಾಯಕ್ಕೆ ‘ಮೋಸಗಾರ’ ಗ್ಯಾಟ್ಲಿನ್ ಅಡ್ಡಿ
ಲಂಡನ್, ಆ.6: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀ.ಓಟದಲ್ಲಿ ಚಿನ್ನದ ಪದಕ ಜಯಿಸಿರುವ ಅಮೆರಿಕದ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ‘ಸೂಪರ್‌ಸ್ಟಾರ್’ ಉಸೇನ್ ಬೋಲ್ಟ್‌ಗೆ ಚಿನ್ನದೊಂದಿಗೆ ವಿದಾಯ ಹೇಳುವುದಕ್ಕೆ ಅಡ್ಡಿಯಾಗಿದ್ದಾರೆ ಎಂದು ಲಂಡನ್‌ನ ಮಾಧ್ಯಮಗಳು ಟೀಕಿಸಿವೆ.
‘ಪ್ರಶಸ್ತಿ ಫೇವರಿಟ್’ ಬೋಲ್ಟ್‌ರನ್ನು ಮಣಿಸಿ ಗ್ಯಾಟ್ಲಿನ್ ಚಿನ್ನ ಗೆದ್ದಿರುವುದಕ್ಕೆ ಲಂಡನ್ ಸ್ಟೇಡಿಯಂನಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದರು. ಈ ಹಿಂದೆ ಎರಡು ಬಾರಿ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೆ ಒಳಗಾಗಿರುವ ಗ್ಯಾಟ್ಲಿನ್ ಚಿನ್ನದ ಪದಕ ಗೆದ್ದುಕೊಂಡಿರುವುದು ಬ್ರಿಟನ್‌ನ ಜನತೆ ಹಾಗೂ ಮಾಧ್ಯಮಗಳಿಗೆ ಬೇಸರ ತರಿಸಿದೆ. ಗ್ಯಾಟ್ಲಿನ್ ಡ್ರಗ್ಸ್ ಸೇವನೆ ಪ್ರಕರಣದಲ್ಲಿ 2006ರಿಂದ 2010ರ ತನಕ ನಾಲ್ಕು ವರ್ಷ ನಿಷೇಧ ಎದುರಿಸಿದ್ದರು. 100 ಮೀ. ಓಟದ ಫೈನಲ್‌ನಲ್ಲಿ ಬೋಲ್ಟ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಗ್ಯಾಟ್ಲಿನ್ ಮಂಡಿವೂರಿ ಬೋಲ್ಟ್‌ಗೆ ನಮಸ್ಕರಿಸಿ ಕ್ರೀಡಾಸ್ಫೂರ್ತಿ ಮೆರೆದಿದ್ದರು.
‘ಉಸೇನ್ ಬೋಲ್ಟ್‌ರ ಚಿನ್ನದ ವಿದಾಯವನ್ನು ಹಾಳು ಮಾಡಿದ ಡ್ರಗ್ಸ್ ವಂಚಕ ಗ್ಯಾಟ್ಲಿನ್’ ಎಂಬ ತಲೆಬರಹದಲ್ಲಿ ‘ದಿ ಸನ್’ ಪತ್ರಿಕೆ ವರದಿ ಮಾಡಿದೆ. ಗ್ಯಾಟ್ಲಿನ್ 100 ಮೀ. ಓಟವನ್ನು ಗೆದ್ದ ಬಳಿಕ ಸಂದರ್ಶನಕ್ಕಾಗಿ ಬಂದಾಗ ಪ್ರೇಕ್ಷಕರು ‘ಚೀಟ್, ಚೀಟ್, ಚೀಟ್’ ಎಂದು ಕೂಗುತ್ತಾ ಹೀಯಾಳಿಸಿದರು.
ಜಮೈಕಾದ ಓಟಗಾರ ಬೋಲ್ಟ್ ಜಾಗತಿಕ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 12ನೆ ಬಾರಿ ಚಿನ್ನದ ಪದಕ ಜಯಿಸುವ ಅವಕಾಶವನ್ನು ಗ್ಯಾಟ್ಲಿನ್ ಹಾಳು ಮಾಡಿದರು ಎಂದು ‘ದಿ ಮೈಲ್’ ಪತ್ರಿಕೆ ಟೀಕಿಸಿದೆ. ಎರಡು ಬಾರಿ ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿರುವ ಮೋಸಗಾರ ಗ್ಯಾಟ್ಲಿನ್ ಕ್ರೀಡೆಯ ಶ್ರೇಷ್ಠ ಹೀರೋ ಬೋಲ್ಟ್ ರ ವಿದಾಯದ 100 ಮೀ. ಓಟದಲ್ಲಿ ಚಿನ್ನದ ಪದಕ ನಿರಾಕರಿಸಿರುವುದು ಅಥ್ಲೆಟಿಕ್ಸ್ ಲೋಕಕ್ಕೆ ದುಸ್ವಪ್ನವಾಗಿದೆ ಎಂದು ಬ್ರಿಟನ್ ಪತ್ರಿಕೆಗಳು ಬಣ್ಣಿಸಿವೆ.