ಚೀನಾದೊಂದಿಗೆ ಶಾಂತಿಗಾಗಿ ಪ್ರಶಸ್ತಿ ವಾಪಸ್: ವಿಜೇಂದರ್

Update: 2017-08-06 18:21 GMT

ಮುಂಬೈ, ಆ.6: ‘‘ಭಾರತ-ಚೀನಾ ಗಡಿರೇಖೆಯಲ್ಲಿ ಶಾಂತಿನೆಲೆಸುವ ಉದ್ದೇಶದಿಂದ ಚೀನಾದ ಝುಲ್ಫಿಕರ್ ಮೈಮೈತಾಲಿ ವಿರುದ್ಧ ತಾನು ಜಯಿಸಿರುವ ಡಬ್ಲು ಬಿಒ ಓರಿಯಂಟಲ್ ಸೂಪರ್ ಮಿಡ್ಲ್‌ವೇಟ್ ಪ್ರಶಸ್ತಿಯನ್ನು ವಾಪಸ್ ನೀಡಲು ಸಿದ್ಧ’’ ಎಂದು ಭಾರತದ ಸ್ಟಾರ್ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.
ಪ್ರೊ ಬಾಕ್ಸಿಂಗ್‌ನಲ್ಲಿ ಡಬಲ್ ಚಾಂಪಿಯನ್ ಆಗಿರುವ ವಿಜೇಂದರ್ ಭಾರತ ಹಾಗೂ ಚೀನಾ ಗಡಿರೇಖೆಯಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.

   ‘‘ನಾನು ಗೆದ್ದುಕೊಂಡಿರುವ ಡಬಲ್ ಪ್ರಶಸ್ತಿಯನ್ನು ಭಾರತ-ಚೀನಾದ ಸ್ನೇಹಕ್ಕೆ ಸಮರ್ಪಿಸುವೆ. ಉಭಯ ದೇಶಗಳ ಗಡಿರೇಖೆಯಲ್ಲಿ ಅಶಾಂತಿ ನೆಲೆಸಿರುವುದು ಉತ್ತಮ ಲಕ್ಷಣವಲ್ಲ. ನಾನು ಈ ಪ್ರಶಸ್ತಿಯನ್ನು ಜನತೆಗೆ, ಶಾಂತಿ ಹಾಗೂ ಸ್ನೇಹಕ್ಕಾಗಿ ವಾಪಸ್ ನೀಡುವೆ. ಹಿಂದಿ-ಚೀನಿ ಭಾಯಿ ಭಾಯಿ’’ ಎಂದು ಸುದ್ದಿಗೋಷ್ಠಿಯಲ್ಲಿ ವಿಜೇಂದರ್ ಹೇಳಿದ್ದಾರೆ.

ಶನಿವಾರ ರಾತ್ರಿ ನಡೆದ 10 ಸುತ್ತಿನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ವಿಜೇಂದರ್ ಎದುರಾಳಿ ಚೀನಾದ ಝುಲ್ಫಿಕರ್ ವಿರುದ್ಧ 96-93, 95-94, 95-94 ಅಂತರದಿಂದ ರೋಚಕವಾಗಿ ಜಯ ಸಾಧಿಸಿ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಜೇಯ ಗೆಲುವಿನ ಓಟ ಕಾಯ್ದುಕೊಂಡಿದ್ದರು.

ಪಂದ್ಯ ಕೊನೆಗೊಂಡ ಬಳಿಕ ಚೀನಾದ ಬಾಕ್ಸರ್ ಝುಲ್ಫಿಕರ್ ಅವರು ವಿಜೇಂದರ್‌ರನ್ನು ಆಲಿಂಗಿಸಿಕೊಂಡರಲ್ಲದೆ ತನ್ನ ಕ್ಯಾಪ್‌ನ್ನು ನೀಡಿದರು. ಇದಕ್ಕೆ ಪ್ರತಿಯಾಗಿ ವಿಜೇಂದರ್ ತನ್ನ ಬೆಲ್ಟ್‌ನ್ನು ಚೀನಾದ ಬಾಕ್ಸರ್‌ಗೆ ನೀಡಿದರು.

‘‘ಅವರು(ಝುಲ್ಫಿಕರ್)ನನಗೆ ಕ್ಯಾಪ್ ನೀಡಿದರು. ತಾನು ಕೇಳಿದ್ದಕ್ಕೆ ಕ್ಯಾಪ್ ಕೊಟ್ಟಿದ್ದಾಗಿ ಝುಲ್ಪಿಕರ್ ಹೇಳಿದರು. ನಾನು ಅವರಿಗೆ ಬೆಲ್ಟ್ ಕೊಟ್ಟಿದ್ದೆ. ಅದನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ’’ ಎಂದು ವಿಜೇಂದರ್ ಹೇಳಿದರು.

ನಿಮಗೆ ಪಂದ್ಯ ಗೆಲ್ಲುವ ವಿಶ್ವಾಸವಿತ್ತೇ? ಎಂಬ ಪ್ರಶ್ನೆಗೆ ಉತ್ತರಿಸಿದ ವಿಜೇಂದರ್,‘‘ನಾನು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವೆ. ಸೋಲಿನ ಬಗ್ಗೆ ಯೋಚಿಸುವುದೇ ಇಲ್ಲ. ಮೊದಲ ಆರು ಸುತ್ತು ಚೆನ್ನಾಗಿತ್ತು. ನನ್ನ ಕೋಚ್(ಲೀ ಬಿಯರ್ಡ್)ಪ್ರತಿ ಸುತ್ತನ್ನು ಗೆಲ್ಲುವುದು ಅತ್ಯಂತ ಮುಖ್ಯವೆಂದು ಸಲಹೆ ನೀಡಿದ್ದರು’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News