ಬೋಲ್ಟ್ ವಿದಾಯದ ಓಟಕ್ಕೆ ವೇದಿಕೆ ಸಜ್ಜು

Update: 2017-08-12 18:26 GMT

ಲಂಡನ್, ಆ.12: ಶರವೇಗದ ಓಟಗಾರ ಉಸೇನ್ ಬೋಲ್ಟ್ ನೇತೃತ್ವದ ಜಮೈಕಾ ತಂಡ 4x 100 ಮೀ. ರಿಲೇಯಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದೆ. ಬೋಲ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 15ನೆ ಬಾರಿ ಚಿನ್ನದ ಪದಕ ಜಯಿಸುವ ಮೂಲಕ ವೃತ್ತಿಜೀವನಕ್ಕೆ ವಿದಾಯ ಹೇಳುವ ವಿಶ್ವಾಸದಲ್ಲಿದ್ದಾರೆ.

ಶನಿವಾರ ಇಲ್ಲಿ ನಡೆದ 4x 100 ಮೀ.ರಿಲೇ ಹೀಟ್ಸ್‌ನಲ್ಲಿ ಬೋಲ್ಟ್, ಟೈಕ್ವ್ವೆಂಡೊ ಟ್ರೆಸ್, ಜುಲಿಯನ್ ಫೋರ್ಟ್ ಹಾಗೂ ಮೈಕಲ್ ಕ್ಯಾಂಬೆಲ್ ಅವರನ್ನೊಳಗೊಂಡ ಜಮೈಕಾ ತಂಡ 37.95 ಸೆಕೆಂಡ್‌ನಲ್ಲಿ ಗುರಿ ತಲುಪಿ 3ನೆ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆಯಿತು. ಸತತ 5ನೆ ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಮೇಲೆ ಕಣ್ಣಿಟ್ಟಿರುವ ಜಮೈಕಾ ತಂಡಕ್ಕೆ ಅಮೆರಿಕದಿಂದ ಕಠಿಣ ಸವಾಲು ಎದುರಾಗಿದೆ. ಹೀಟ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅಮೆರಿಕ ತಂಡ 37.70 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದಿದೆ. ಬ್ರಿಟನ್(37.76 ಸೆ.) ಎರಡನೆ ಸ್ಥಾನ ಪಡೆದಿದೆ.

‘‘ಲಂಡನ್ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಬೆಂಬಲ ಅಪೂರ್ವವಾದುದು. ನನಗಾಗುತ್ತಿರುವ ಭಾವನೆಯನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. ವಿದಾಯದ ಓಟದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ತುಂಬಾ ಬೇಸರವಾಗುತ್ತಿದೆ’’ಎಂದು ಬೋಲ್ಟ್ ಹೇಳಿದ್ದಾರೆ. ಬೋಲ್ಟ್ 100 ಮೀ. ಓಟದಲ್ಲಿ ಚಿನ್ನದ ಪದಕದಿಂದ ವಂಚಿತಗೊಂಡಿದ್ದರು. ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ ಹಾಗೂ ಕ್ರಿಸ್ಟಿಯನ್ ಕೊಲ್ಮನ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದ್ದರು.

 ಈಗಾಗಲೇ 100 ಹಾಗೂ 200 ಮೀ. ನಲ್ಲಿ ವಿಶ್ವ ದಾಖಲೆ ನಿರ್ಮಿಸಿ ರುವ ಬೋಲ್ಟ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಜಮೈಕಾ ತಂಡ ರಿಲೇಯಲ್ಲಿ 36.84 ಸೆಕೆಂಡ್‌ನಲ್ಲಿ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಲು ನೆರವಾಗಿದ್ದರು. ಬೋಲ್ಟ್ ಈ ತನಕ ಒಲಿಂಪಿಕ್ಸ್‌ನಲ್ಲಿ 8 ಚಿನ್ನ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 14 ಚಿನ್ನ ಜಯಿಸಿದ್ದಾರೆ. 2007ರಲ್ಲಿ ಎರಡು ಬೆಳ್ಳಿ ಜಯಿಸಿದ್ದರು. ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ನ 100 ಮೀ. ಓಟದಲ್ಲಿ ಕಂಚು ಜಯಿಸಿದ್ದಾರೆ. ಗ್ಯಾಟ್ಲಿನ್ ನೇತೃತ್ವದ ಅಮೆರಿಕ ತಂಡ 37.70 ಸೆಕೆಂಡ್‌ನಲ್ಲಿ ಗುರಿ ತಲುಪಿತು. ಬ್ರಿಟನ್, ಫ್ರಾನ್ಸ್, ಚೀನಾ, ಜಪಾನ್, ಟರ್ಕಿ ಹಾಗೂ ಕೆನಡಾ ಫೈನಲ್‌ಗೆ ಅರ್ಹತೆ ಪಡೆದಿರುವ ಇತರ ತಂಡಗಳಾಗಿವೆ.

ಭಾರತ ರಿಲೇ ತಂಡ ವಿಫಲ: ವಿಶ್ವ ಅಥ್ಲೆಟಿಕ್ಸ್ ಚಾಂಪಿ ಯನ್‌ಶಿಪ್‌ನಲ್ಲಿ ಭಾರತದ ಮಹಿಳಾ 4x400ಮೀ. ರಿಲೇ ತಂಡ 10ನೆ ಸ್ಥಾನ ಪಡೆದು ನಿರಾಶೆಗೊಳಿಸಿತು. ಜಿಸ್ನಾ ಮ್ಯಾಥ್ಯೂ, ಎಂಆರ್ ಪೂವಮ್ಮ, ಅನಿಲ್ಡಾ ಥಾಮಸ್ ಹಾಗೂ ನಿರ್ಮಲಾ ಶೆರೊನ್ 3 ನಿಮಿಷ, 28.62 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಕೆ.ಮುಹಮ್ಮದ್, ಅಮೋಜ್ ಜಾಕಬ್, ಮುಹಮ್ಮದ್ ಅನಾಸ್ ಹಾಗೂ ರಾಜೀವ್ ಅರೋಕಿಯ ಅವರಿದ್ದ ಭಾರತದ ಪುರುಷರ 4x400 ಮೀ.ರಿಲೇ ತಂಡ 3 ನಿಮಿಷ, 2.80 ಸೆಕೆಂಡ್‌ನಲ್ಲಿ ಗುರಿ ತಲುಪಿ 5ನೆ ಸ್ಥಾನ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News