ಹಾಕಿ ಸರಣಿ ಜಯಿಸಿದ ಭಾರತ

Update: 2017-08-15 18:19 GMT

ಆಮ್‌ಸ್ಟರ್‌ಡಮ್, ಆ.15: ಗುರ್ಜಂತ್ ಸಿಂಗ್ ಹಾಗೂ ಮನ್‌ದೀಪ್ ಸಿಂಗ್ ಬಾರಿಸಿದ ತಲಾ ಒಂದು ಗೋಲಿನ ನೆರವಿನಿಂದ ಭಾರತದ ಪುರುಷರ ಹಾಕಿ ತಂಡ ವಿಶ್ವದ ನಂ.4ನೆ ತಂಡ ಹಾಲೆಂಡ್‌ನ್ನು 2-1 ಗೋಲುಗಳ ಅಂತರದಿಂದ ಮಣಿಸಿದೆ.

ಸೋಮವಾರ ಅತ್ಯಂತ ಕುತೂಹಲಕಾರಿಯಾಗಿ ಸಾಗಿದ ಪಂದ್ಯದಲ್ಲಿ ಜೂನಿಯರ್ ತಂಡದ 9 ಆಟಗಾರರನ್ನು ಒಳಗೊಂಡ ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡ ಗಮನಾರ್ಹ ಪ್ರದರ್ಶನ ನೀಡಿತು. ಭಾರತದ ಪರ ಗುರ್ಜಂತ್(4ನೆ ನಿಮಿಷ) ಹಾಗೂ ಮನ್‌ದೀಪ್(51ನೆ ನಿಮಿಷ) ತಲಾ ಒಂದು ಗೋಲು ಬಾರಿಸಿ ಗೆಲುವಿನ ಕಾಣಿಕೆ ನೀಡಿದರು.

ಈ ಗೆಲುವಿನ ಮೂಲಕ ಭಾರತ ತಂಡ ಹಾಲೆಂಡ್ ವಿರುದ್ಧದ ಎರಡು ಪಂದ್ಯಗಳ ಹಾಕಿ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.

  ನಾಲ್ಕನೆ ನಿಮಿಷದಲ್ಲಿ ಗೋಲು ಬಾರಿಸಿದ ಭಾರತ ಆತಿಥೇಯ ತಂಡಕ್ಕೆ ಆರಂಭದಲ್ಲೇ ಒತ್ತಡ ಹೇರಿತು. ತಂಡಕ್ಕೆ 1-0 ಮುನ್ನಡೆ ಒದಗಿಸಿದ ಗುರ್ಜಂತ್ ಸಿಂಗ್ ಮೊದಲ ಅಂತಾರಾಷ್ಟ್ರೀಯ ಗೋಲು ಬಾರಿಸಿದರು.

 ಅರ್ಮಾನ್ ಖುರೇಶಿ ಭಾರತಕ್ಕೆ 2-0 ಮುನ್ನಡೆ ಒದಗಿಸಲು ಯತ್ನಿಸಿದರು. ಆದರೆ ಅವರು ಬಾರಿಸಿದ ಗೋಲು ವೈಡ್ ಆಗಿತ್ತು. 2ನೆ ಕ್ವಾರ್ಟರ್‌ನಲ್ಲಿ ಮೂರು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಡಚ್ಚರು ಭಾರತಕ್ಕೆ ಒತ್ತಡ ಹೇರಿದರು. ಭಾರತದ ಗೋಲ್‌ಕೀಪರ್ ಆಕಾಶ್ ಚಿಟ್ಕೆ ಹಾಲೆಂಡ್‌ಗೆ ಗೋಲು ನಿರಾಕರಿಸಿ ತಂಡಕ್ಕೆ ಆಸರೆಯಾದರು.

51ನೆ ನಿಮಿಷದಲ್ಲಿ ಸ್ಟ್ರೈಕರ್ ಮನ್‌ದೀಪ್ ಭಾರತದ ಮುನ್ನಡೆಯನ್ನು 2-0ಗೆ ಏರಿಸಿದರು. 58ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ಸಾಂಡರ್ ಡಿ ವಿಜಿನ್ ಡಚ್‌ನ ಪರ ಸಮಾಧಾನಕರ ಗೋಲು ಬಾರಿಸಿದರು.

‘‘ಹಾಲೆಂಡ್ ವಿರುದ್ಧ ಎಲ್ಲ ವಿಭಾಗಗಳಲ್ಲಿ ಉತ್ತಮವಾಗಿ ಆಡಿರುವ ಕಾರಣ ನಾವು ಗೆಲುವು ಸಾಧಿಸಿದ್ದೇವೆ. ಹಾಲೆಂಡ್ ತುಂಬಾ ಅನುಭವಿ ತಂಡ. ಆ ತಂಡದಲ್ಲಿರುವ 8 ಆಟಗಾರರು 100ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲೆಂಡ್‌ನ್ನು ಸೋಲಿಸಿರುವುದು ನಮ್ಮ ವಿಶೇಷ ಸಾಧನೆಯಾಗಿದೆ. ಇಡೀ ತಂಡ ಒಗ್ಗಟ್ಟಿನಿಂದ ಆಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಯುವ ಆಟಗಾರರು ಹೆದರದೇ ಆತ್ಮವಿಶ್ವಾಸದಿಂದ ಆಡಿದ್ದಾರೆ’’ ಎಂದು ನಾಯಕ ಮನ್‌ದೀಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News