ಆರಂಭಿಕ ಜೋಡಿ ಜೀವನಶ್ರೇಷ್ಠ ಸಾಧನೆ

Update: 2017-08-15 18:24 GMT

ದುಬೈ, ಆ.15: ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಭಾರತದ ಆರಂಭಿಕ ಆಟಗಾರರಾದ ಕೆ.ಎಲ್. ರಾಹುಲ್ ಹಾಗೂ ಶಿಖರ್ ಧವನ್ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ಕನ್ನಡಿಗ ರಾಹುಲ್ 9ನೆ ಸ್ಥಾನಕ್ಕೆ ಏರುವ ಮೂಲಕ ಅಗ್ರ-10ರಲ್ಲಿ ಸ್ಥಾನ ಪಡೆದರೆ, ಧವನ್ 28ನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಪಲ್ಲೆಕಲೆಯಲ್ಲಿ ಸೋಮವಾರ ಕೊನೆಗೊಂಡಿರುವ ಮೂರನೆ ಹಾಗೂ ಅಂತಿಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 119 ರನ್ ಗಳಿಸಿದ್ದ ಧವನ್ 10 ಸ್ಥಾನ ಭಡ್ತಿ ಪಡೆದು 28ನೆ ಸ್ಥಾನಕ್ಕೇರಿದ್ದಾರೆ. ಧವನ್ ಶತಕದ ನೆರವಿನಿಂದ ಭಾರತ ಮೂರನೆ ದಿನದಾಟದಲ್ಲೇ ಇನಿಂಗ್ಸ್ ಅಂತರದಲ್ಲಿ ಪಂದ್ಯವನ್ನು ಜಯಿಸಿ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿತ್ತು.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡನೆ ಶತಕ ಬಾರಿಸಿದ್ದ ದಿಲ್ಲಿ ಬ್ಯಾಟ್ಸ್‌ಮನ್ ಧವನ್ ಸರಣಿಯಲ್ಲಿ ಒಟ್ಟು 359 ರನ್ ಗಳಿಸಿದ್ದರು. ಈ ಸಾಧನೆಗೆ ‘ಸರಣಿಶ್ರೇಷ್ಠ’ಪ್ರಶಸ್ತಿ ಪಡೆದಿದ್ದಾರೆ.

ಮೂರನೆ ಟೆಸ್ಟ್‌ನಲ್ಲಿ 85 ರನ್ ಗಳಿಸಿದ್ದಲ್ಲದೆ ಧವನ್‌ರೊಂದಿಗೆ ಮೊದಲ ವಿಕೆಟ್‌ಗೆ 188 ರನ್ ಜೊತೆಯಾಟ ನಡೆಸಿ ಭದ್ರಬುನಾದಿ ಹಾಕಿಕೊಟ್ಟಿದ್ದ ರಾಹುಲ್ 2 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 9ನೆ ಸ್ಥಾನಕ್ಕೆ ಏರಿದ್ದಾರೆ. ರಾಹುಲ್ ಈ ವರ್ಷದ ಜುಲೈನಲ್ಲಿ 9ನೆ ರ್ಯಾಂಕಿಗೆ ತಲುಪಿದ್ದು ಇದೀಗ ಎರಡನೆ ಬಾರಿ ಈ ಸಾಧನೆ ಮಾಡಿದ್ದಾರೆ. ಪ್ರಸ್ತುತ ಅವರು 761 ಅಂಕಗಳನ್ನು ಹೊಂದಿದ್ದಾರೆ.

3ನೆ ಟೆಸ್ಟ್‌ನಲ್ಲಿ 96 ಎಸೆತಗಳಲ್ಲಿ 108 ರನ್ ಗಳಿಸಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 45 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 68ನೆ ರ್ಯಾಂಕಿಗೆ ಲಗ್ಗೆ ಇಟ್ಟಿದ್ದಾರೆ.

ಬೌಲರ್‌ಗಳ ಪೈಕಿ ವೇಗಿಗಳಾದ ಮುಹಮ್ಮದ್ ಶಮಿ(1 ಸ್ಥಾನ ಭಡ್ತಿ ಪಡೆದು 19ನೆ ಸ್ಥಾನ) ಹಾಗೂ ಉಮೇಶ್ ಯಾದವ್(1 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 21) ಭಡ್ತಿ ಪಡೆದಿದ್ದಾರೆ. ಭಾರತದ ಚೈನಾಮನ್ ಬೌಲರ್ ಕುಲ್‌ದೀಪ್ ಯಾದವ್ ಹಾಗೂ ಶ್ರೀಲಂಕಾದ ಲಕ್ಷಣ್ ಸಂಡಕನ್ ರ್ಯಾಂಕಿಂಗ್‌ನಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಿದ್ದಾರೆ. 3ನೆ ಟೆಸ್ಟ್‌ನಲ್ಲಿ 40 ರನ್‌ಗೆ 4 ವಿಕೆಟ್, 56ಕ್ಕೆ 1 ವಿಕೆಟ್ ಕಬಳಿಸಿದ್ದ ಯಾದವ್ 29 ಸ್ಥಾನ ಮೇಲಕ್ಕೇರಿ 58ನೆ ಸ್ಥಾನ ತಲುಪಿದರು. ಐದು ವಿಕೆಟ್ ಗೊಂಚಲು ಪಡೆದಿದ್ದ ಲಕ್ಷಣ್(5-132) 16 ಸ್ಥಾನ ಭಡ್ತಿ ಪಡೆದು 57ನೆ ಸ್ಥಾನ ತಲುಪಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ನಂ.1 ಸ್ಥಾನವನ್ನು ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್‌ಗೆ ಬಿಟ್ಟುಕೊಟ್ಟಿದ್ದಾರೆ.

ನಂ.1 ರ‍್ಯಾಂಕಿನಲ್ಲಿರುವ ಭಾರತ ಹಾಗೂ ಏಳನೆ ರ‍್ಯಾಂಕಿನಲ್ಲಿರುವ ಶ್ರೀಲಂಕಾ ಟೀಮ್ ರ‍್ಯಾಂಕಿಂಗ್‌ನಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿವೆ. ಎರಡು ಅಂಕವನ್ನು ಗಳಿಸಿರುವ ಭಾರತ ಒಟ್ಟು 125 ಅಂಕದೊಂದಿಗೆ ದಕ್ಷಿಣ ಆಫ್ರಿಕಕ್ಕಿಂತ 15 ಅಂಕ ಮುಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News