ರಾಮ್‌ಕುಮಾರ್ ದ್ವಿತೀಯ ಸುತ್ತಿಗೆ ತೇರ್ಗಡೆ

Update: 2017-08-15 18:27 GMT

ಸಿನ್ಸಿನಾಟಿ, ಆ.15: ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಎರಡನೆ ಸುತ್ತಿಗೆ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೆನ್ನೈನ ಯುವ ಆಟಗಾರ ರಾಮ್‌ಕುಮಾರ್ ಅಮೆರಿಕದ ಕ್ವಾಲಿಫೈಯರ್ ಕ್ರಿಸ್ಟೊಫರ್ ಎಬ್ಯಾಂಕ್ಸ್‌ರನ್ನು 6-7(5), 6-1, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

ರಾಮ್‌ಕುಮಾರ್ ಸಿನ್ಸಿನಾಟಿ ಟೂರ್ನಿಯ ಅಂತಿಮ ಕ್ವಾಲಿಫೈಯರ್‌ನಲ್ಲಿ ಸೋತಿದ್ದರು. ವಿಶ್ವದ ನಂ.21ನೆ ಆಟಗಾರ ಗೇಲ್ ಮಾನ್‌ಫಿಲ್ಸ್ ಜ್ವರದಿಂದಾಗಿ ಟೂರ್ನಿಯಿಂದ ಹಿಂದೆ ಸರಿದ ಕಾರಣ ವಿಶ್ವದ ನಂ.180ನೆ ಆಟಗಾರ ರಾಮ್‌ಕುಮಾರ್ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದರು. ತನಗೆ ಲಭಿಸಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರಾಮ್‌ಕುಮಾರ್ 2ನೆ ಸುತ್ತಿಗೆ ತಲುಪಿದ್ದಾರೆ.

 22ರ ಹರೆಯದ ರಾಮ್‌ಕುಮಾರ್ ಅಂಟಾಲಿಯಾದಲ್ಲಿ ವಿಶ್ವದ ನಂ.8ನೆ ಆಸ್ಟ್ರಿಯದ ಆಟಗಾರ ಡೊಮಿನಿಕ್ ಥೀಮ್‌ರನ್ನು ಮಣಿಸಿ ಎಲ್ಲರ ಗಮನ ಸೆಳೆದಿದ್ದರು. ಸಿನ್ಸಿನಾಟಿ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ರಾಮ್ ಸರ್ಬಿಯದ ಡುಸಾನ್ ಲಾಜೊವಿಕ್‌ರನ್ನು ಮಣಿಸಿದ್ದರು. ಆದರೆ, ಅಂತಿಮ ಸುತ್ತಿನಲ್ಲಿ ಜರ್ಮನಿಯ ಮ್ಯಾಕ್ಸಿಮಿಲಿಯನ್ ಮಾರ್ಟರೆರ್ ವಿರುದ್ಧ ಸೋತಿದ್ದರು. ಇದೇ ಸಮಯದಲ್ಲಿ ಮಾನ್‌ಫಿಲ್ಸ್ ಟೂರ್ನಿಯಿಂದ ಹಿಂದೆ ಸರಿದ ಕಾರಣ ರಾಮ್‌ಕುಮಾರ್ ಪ್ರಧಾನ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

ಮುಂದಿನ ತಿಂಗಳು ಕೆನಡಾ ವಿರುದ್ಧ ನಡೆಯಲಿರುವ ಡೇವಿಸ್‌ಕಪ್ ವಿಶ್ವ ಗ್ರೂಪ್ ಪ್ಲೇ-ಆಫ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ರಾಮ್‌ಕುಮಾರ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಡೊನಾಲ್ಡ್‌ಸನ್ ಅಥವಾ ಸ್ಪೇನ್‌ನ ರೊಬರ್ಟೊ ಬೌಟಿಸ್ಟಾ-ಅಗುಟ್‌ರ ಸವಾಲನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News