​ಬಲ್ಗೇರಿಯ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಲಕ್ಷ್ಯ ಸೇನ್ ಚಾಂಪಿಯನ್

Update: 2017-08-17 18:25 GMT

ಹೊಸದಿಲ್ಲಿ, ಆ.17: ಭಾರತದ ಕಿರಿಯ ಶಟ್ಲರ್ ಲಕ್ಷ ಸೇನ್ ಬಲ್ಗೇರಿಯ ಓಪನ್ ಇಂಟರ್‌ನ್ಯಾಶನಲ್ ಸೀರಿಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

 ಬಲ್ಗೇರಿಯದ ಸೋಫಿಯದಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಲಕ್ಷ ಸೇನ್ ಕ್ರೊಯೇಷಿಯದ ರ್ವೊನಿಮಿರ್ ಡರ್ಕಿನ್‌ಜಕ್ ವಿರುದ್ಧ 18-21, 21-12, 21-17 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಉತ್ತರಖಂಡದ 16ರ ಹರೆಯದ ಬಾಲಕ ಲಕ್ಷ ಸೇನ್ ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಶ್ರೀಲಂಕಾದ ಡಿನುಕಾ ಕರುಣರತ್ನರನ್ನು 21-19, 21-14 ಗೇಮ್‌ಗಳ ಅಂತರದಿಂದ ಮಣಿಸಿದ್ದರು.

ಲಕ್ಷ ಇತ್ತೀಚೆಗೆ ಆಲ್ ಇಂಗ್ಲೆಂಡ್ ಚಾಂಪಿಯನ್ ಪೀಟರ್ ಗಾಡೆ ಅವರಿಂದ ತರಬೇತಿ ಪಡೆದಿದ್ದರು. ಗಾಡೆ ಪ್ರಸ್ತುತ ಫ್ರೆಂಚ್ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿದ್ದಾರೆ.

‘‘ಇದು ಲಕ್ಷ ಸೇನ್‌ರ ಅಪೂರ್ವ ಸಾಧನೆಯಾಗಿದೆ. ಅವರಿಗೆ ಈಗ 16 ವರ್ಷ. ಆದಾಗ್ಯೂ ಅಂತಾರಾಷ್ಟ್ರೀಯ ಟೂರ್ನಿಯನ್ನು ಜಯಿಸಿರುವುದು ಉತ್ತಮ ಸಂಕೇತ. ನಾವು ಫ್ರಾನ್ಸ್ ರಾಜಧಾನಿಗೆ 10 ದಿನಗಳ ತರಬೇತಿಗೆ ಐದು ಆಟಗಾರರನ್ನು ಕಳುಹಿಸಿಕೊಟ್ಟಿದ್ದೆವು. ಲಕ್ಷ ಶ್ರೇಷ್ಠ ಕೋಚ್ ಪೀಟರ್ ಗಾಡೆ ಅವರಿಂದ ತರಬೇತಿ ಪಡೆದಿದ್ದರು. ಇದರಿಂದ ಅವರು ಸಾಕಷ್ಟು ಲಾಭ ಪಡೆದಿದ್ದಾರೆ’’ ಎಂದು ಕೋಚ್ ವಿಮಲ್ ಕುಮಾರ್ ಹೇಳಿದ್ದಾರೆ.

‘‘ಲಕ್ಷ ಸೇನ್ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿದ್ದರು. ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಸ್ಯಾಮ್ ಪರ್ಸನ್ಸ್‌ರನ್ನು ಮಣಿಸಿದ್ದರು. ಜೂನಿಯರ್ ನ್ಯಾಶನಲ್ ಪ್ರಶಸ್ತಿಯನ್ನು ಜಯಿಸಿದ್ದ ಅವರು ಈವರ್ಷ ಸೀನಿಯರ್ ನ್ಯಾಶನಲ್ಸ್‌ನಲ್ಲಿ ಫೈನಲ್‌ಗೆ ತಲುಪಿದ್ದರು. ನಮ್ಮ ದೇಶದ ಅಗ್ರ ಆಟಗಾರ ಎಚ್.ಎಸ್. ಪ್ರಣಯ್‌ರನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದರು’’ ಎಂದು ವಿಮಲ್‌ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News