ಕುಕ್, ರೂಟ್‌ ಶತಕ, ಸುಸ್ಥಿತಿಯಲ್ಲಿ ಇಂಗ್ಲೆಂಡ್‌

Update: 2017-08-18 18:10 GMT

ಬರ್ಮಿಂಗ್‌ಹ್ಯಾಮ್, ಆ.18: ಇಂಗ್ಲೆಂಡ್ ನೆಲದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಅಲಿಸ್ಟರ್ ಕುಕ್ ಹಾಗೂ ನಾಯಕ ಜೋ ರೂಟ್ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ವೆಸ್ಟ್‌ಇಂಡೀಸ್ ವಿರುದ್ಧ ಉತ್ತಮ ಮೊತ್ತ ಕಲೆ ಹಾಕಿದೆ.

ಗುರುವಾರ ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 3 ವಿಕೆಟ್‌ಗಳ ನಷ್ಟಕ್ಕೆ 348 ರನ್ ಗಳಿಸಿತ್ತು. ಆರು ಗಂಟೆಗೂ ಅಧಿಕ ಕಾಲ ಕ್ರೀಸ್‌ನಲ್ಲಿರುವ ಕುಕ್ ಅಜೇಯ 153 ರನ್ ಗಳಿಸಿದ್ದು, ರೂಟ್ ಅವರೊಂದಿಗೆ 3ನೆ ವಿಕೆಟ್‌ಗೆ 248 ರನ್ ಜೊತೆಯಾಟ ನಡೆಸಿದ್ದಾರೆ.

ಇಂಗ್ಲೆಂಡ್ 39 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಆಗ ಜೊತೆಯಾದ ಹಾಲಿ ಹಾಗೂ ಮಾಜಿ ನಾಯಕರಾದ ರೂಟ್-ಕುಕ್ ಜೋಡಿ ವಿಂಡೀಸ್ ಬೌಲರ್‌ಗಳನ್ನು ಬೆಂಡೆತ್ತಿದರು.

ರೂಟ್ ಸತತ 11ನೆ ಅರ್ಧಶತಕ ಪೂರೈಸುವ ಮೂಲಕ ಇಂಗ್ಲೆಂಡ್ ಪರ ಹೊಸ ದಾಖಲೆ ನಿರ್ಮಿಸಿದರು. ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್ ದಾಖಲೆ(12) ಮುರಿಯಲು ಇನ್ನೊಂದು ಅರ್ಧಶತಕದ ಅಗತ್ಯವಿದೆ.

ಕಳೆದ ತಿಂಗಳು ಲಾರ್ಡ್ಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ 190 ರನ್ ಗಳಿಸಿದ್ದ ರೂಟ್ ಆಫ್ ಸ್ಪಿನ್ನರ್ ರೋಸ್ಟನ್ ಚೇಸ್ ಎಸೆತವನ್ನು ಬೌಂಡರಿಗೆ ಅಟ್ಟುವುದರೊಂದಿಗೆ 139 ಎಸೆತಗಳಲ್ಲಿ 13ನೆ ಟೆಸ್ಟ್ ಶತಕ ಪೂರೈಸಿದರು.

ಈಗಾಗಲೇ ಇಂಗ್ಲೆಂಡ್‌ನ ಪರ ಗರಿಷ್ಠ ಟೆಸ್ಟ್ಟ್ ರನ್ ದಾಖಲಿಸಿರುವ ಕುಕ್ 182 ಎಸೆತಗಳಲ್ಲಿ 31ನೆ ಶತಕ ದಾಖಲಿಸಿದ್ದಾರೆ. ಜೋಸೆಫ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ 150 ರನ್ ಪೂರೈಸಿದ್ದಾರೆ.

1970 ಹಾಗೂ 1980ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದ ವೆಸ್ಟ್‌ಇಂಡೀಸ್ ಕಳೆದ 20 ವರ್ಷಗಳಲ್ಲಿ ವಿದೇಶದಲ್ಲಿ ಆಡಿರುವ 86 ಟೆಸ್ಟ್‌ಗಳ ಪೈಕಿ ಕೇವಲ 3 ಪಂದ್ಯಗಳನ್ನು ಜಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News