ಸಿನ್ಸಿನಾಟಿ ಮಾಸ್ಟರ್ಸ್: ಹಾಲೆಪ್, ಮುಗುರುಝ ಕ್ವಾರ್ಟರ್ ಫೈನಲ್ ಗೆ

Update: 2017-08-18 18:14 GMT

ಸಿನ್ಸಿನಾಟಿ, ಆ.18: ರೊಮಾನಿಯದ ಆಟಗಾರ್ತಿ ಸಿಮೊನಾ ಹಾಲೆಪ್, ಸ್ಫೇನ್‌ನ ಗಾರ್ಬೈನ್ ಮುಗುರುಝ, ಬ್ರಿಟನ್‌ನ ಜೊಹನ್ನಾ ಕೊಂಟಾ ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ದ್ವಿತೀಯ ಶ್ರೇಯಾಂಕದ ಹಾಲೆಪ್ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ಲಾಟ್ವಿಯದ 15ನೆ ಶ್ರೇಯಾಂಕದ ಆಟಗಾರ್ತಿ ಅನಸ್ಟಸಿಜಾ ಸೆವಾಸ್ಟೊವಾರನ್ನು 6-4, 6-3 ಸೆಟ್‌ಗಳಿಂದ ಮಣಿಸಿದ್ದಾರೆ.

ಏಳನೆ ಶ್ರೇಯಾಂಕದ ಕಾಂಟಾ ಸ್ಲೋವಾಕಿಯದ 11ನೆ ಶ್ರೇಯಾಂಕದ ಡೊಮಿನಿಕಾ ಸಿಬುಲ್ಕೋವಾರನ್ನು 6-3, 6-4 ನೇರ ಸೆಟ್‌ಗಳಿಂದ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ವಿಂಬಲ್ಡನ್ ಚಾಂಪಿಯನ್ ಮುಗುರುಝ ಅಮೆರಿಕದ 17ನೆ ರ್ಯಾಂಕಿನ ಮ್ಯಾಡಿಸನ್ ಕೀಸ್‌ರನ್ನು 6-4, 3-6, 7-6(7/3) ಸೆಟ್‌ಗಳಿಂದ ಮಣಿಸಿದ್ದಾರೆ.

 ಮುಗುರುಝ ಅಂತಿಮ 8ರ ಸುತ್ತಿನಲ್ಲಿ ರಶ್ಯದ ಎರಡು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಸ್ವೆಟ್ಲಾನಾ ಕುಝ್ನೆಸೋವಾರನ್ನು ಎದುರಿಸಲಿದ್ದಾರೆ. ಸ್ವೆಟ್ಲಾನಾ ಮತ್ತೊಂದು ಪಂದ್ಯದಲ್ಲಿ ಸ್ಪೇನ್‌ನ ಕಾರ್ಲ್ ಸುಯರೆಝ್‌ರನ್ನು 6-2, 6-4 ನೇರ ಸೆಟ್‌ಗಳಿಂದ ಮಣಿಸಿದ್ದಾರೆ. ಹಾಲಿ ಚಾಂಪಿಯನ್ ಕರೊಲಿನಾ ಪ್ಲಿಸ್ಕೋವಾ ಅವರ 3ನೆ ಸುತ್ತಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಪ್ಲಿಸ್ಕೋವಾ ಇಟಲಿಯ ಕ್ಯಾಮಿಲಾ ಗಿಯೊರ್ಗಿ ವಿರುದ್ಧ 3-0 ಮುನ್ನಡೆಯಲ್ಲಿದ್ದಾಗ ಆಟಕ್ಕೆ ಮಳೆ ಅಡ್ಡಿ ಪಡಿಸಿತ್ತು. ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ ಹಾಗೂ ಸ್ಪೇನ್‌ನ ಅಲ್ಬರ್ಟ್ ರಾಮೊಸ್-ವಿನೊಲಸ್ ನಡುವಿನ 3ನೆ ಸುತ್ತಿನ ಪಂದ್ಯ ಮಳೆಯಿಂದಾಗಿ ಮುಂದೂಡಲ್ಪಟ್ಟಿದೆ. ಆ್ಯಂಡಿ ಮರ್ರೆ ಹಾಗೂ ರೋಜರ್ ಫೆಡರರ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರ ನಡೆದಿರುವ ಹಿನ್ನೆಲೆಯಲ್ಲಿ ನಡಾಲ್ ಮುಂದಿನ ಹಾದಿ ಸುಗಮವಾಗಿದೆ. ನಡಾಲ್ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್‌ರನ್ನು ಎದುರಿಸುವ ಸಾಧ್ಯತೆಯಿದೆ.

ಅಮೆರಿಕದ 14ನೆ ಶ್ರೇಯಾಂಕದ ಆಟಗಾರ ಜಾನ್ ಇಸ್ನೆರ್ ಫ್ರಾನ್ಸಿಸ್ ಟಿಯಫೊರನ್ನು 7-6(7/4), 7-5 ಸೆಟ್‌ಗಳಿಂದ ಮಣಿಸಿದರು. ಆಸ್ಟ್ರೇಲಿಯದ ಡೊಮಿನಿಕ್ ಥೀಮ್ ಫ್ರಾನ್ಸ್‌ನ ಆ್ಯಂಡಿಯನ್ ಮನಾರಿನೊರನ್ನು 7-6(7/4), 7-6(7/3) ಸೆಟ್‌ಗಳಿಂದ ಮಣಿಸಿದ್ದು ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್‌ನ ಡೇವಿಡ್ ಫೆರರ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News