ನಡಾಲ್ ಗೆ ಶಾಕ್ ನೀಡಿದ ಕಿರ್ಗಿಯೊಸ್ ಸೆಮಿಗೆ

Update: 2017-08-19 18:44 GMT

ಸಿನ್ಸಿನಾಟಿ, ಆ.19: ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್‌ರನ್ನು ನೇರ ಸೆಟ್‌ಗಳಿಂದ ಮಣಿಸಿರುವ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಎಟಿಪಿ ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನಕ್ವಾರ್ಟರ್ ಫೈನಲ್‌ನಲ್ಲಿ 22ರ ಹರೆಯದ ಕಿರ್ಗಿಯೊಸ್ ಸ್ಪೇನ್‌ನ ನಡಾಲ್‌ರನ್ನು 6-2, 7-5 ಸೆಟ್‌ಗಳಿಂದ ಸೋಲಿಸಿದರು.

ಇದಕ್ಕೆ ಮೊದಲು ನಡೆದ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಕಿರ್ಗಿಯೊಸ್ ಕ್ರೊಯೇಷಿಯದ ಇವೊ ಕಾರ್ಲೊವಿಕ್‌ರನ್ನು 4-6, 7-6(8/6), 6-3 ಸೆಟ್‌ಗಳಿಂದ ಅಂತರದಿಂದ ಮಣಿಸಿದರೆ, ಮತ್ತೊಂದು ಪಂದ್ಯದಲ್ಲಿ ನಡಾಲ್ ಅವರು ತಮ್ಮದೇ ದೇಶದ ಅಲ್ಬರ್ಟ್‌ವಿನೊಲಸ್‌ರನ್ನು 7-6(7/1), 6-2 ಸೆಟ್‌ಗಳಿಂದ ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದರು.

ಕಿರ್ಗಿಯೊಸ್ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ಡೇವಿಡ್ ಫೆರರ್‌ರನ್ನು ಎದುರಿಸಲಿದ್ದಾರೆ. ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್‌ನ ಡೇವಿಡ್ ಫೆರರ್ ಆಸ್ಟ್ರೀಯದ 8ನೆ ರ್ಯಾಂಕಿನ ಡೊಮಿನಿಕ್ ಥೀಮ್ ವಿರುದ್ಧ 6-3, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಬಲ್ಗೇರಿಯದ ಏಳನೆ ಶ್ರೇಯಾಂಕದ ಗ್ರಿಗೊರ್ ಡಿಮಿಟ್ರೊವ್ ಜಪಾನ್‌ನ ಯುಚಿ ಸುಗಿತರನ್ನು 6-2, 6-1 ಸೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ತಲುಪಿದರು.

ಪ್ಲಿಸ್ಕೋವಾ,ಮುಗುರುಝ ಸೆಮಿಫೈನಲ್‌ಗೆ :

ಹಾಲಿ ಚಾಂಪಿಯನ್ ಕರೊಲಿನಾ ಪ್ಲಿಸ್ಕೋವಾ ಈ ವರ್ಷ ಮೂರನೆ ಬಾರಿ ಒಂದೇ ದಿನ ಎರಡು ಪಂದ್ಯಗಳನ್ನು ಜಯಿಸಿದರು. ಈಮೂಲಕ ವಿಶ್ವದ ನಂ.1 ಸ್ಥಾನದ ಮೇಲೆ ಬಿಗಿ ಹಿಡಿತ ಸಾಧಿಸಿದರು. ಮಳೆಯಿಂದಾಗಿ ಶುಕ್ರವಾರಕ್ಕೆ ಮುಂದೂಡಲ್ಪಟ್ಟ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಪ್ಲಿಸ್ಕೋವಾ ಇಟಲಿಯ ಕ್ಯಾಮಿಲಾ ಗಿಯೊರ್ಗಿ ಅವರನ್ನು 6-3, 4-6, 6-0 ಅಂತರದಿಂದ ಮಣಿಸಿದರು. ಎರಡು ಗಂಟೆಯ ಬಳಿಕ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ 25ರ ಹರೆಯದ ಝೆಕ್ ಆಟಗಾರ್ತಿ ಪ್ಲಿಸ್ಕೋವಾ ಡೆನ್ಮಾರ್ಕ್‌ನ 5ನೆ ರ್ಯಾಂಕಿನ ಕರೊಲಿನಾ ವೋಝ್ನಿಯಾಕಿ ಅವರನ್ನು 6-2, 6-4 ಸೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ತೇರ್ಗಡೆಯಾದರು. ಸೆಮಿಫೈನಲ್‌ನಲ್ಲಿ ವಿಂಬಲ್ಡನ್ ಚಾಂಪಿಯನ್ ಗಾರ್ಬೈನ್ ಮುಗುರುಝ ಅವರನ್ನು ಎದುರಿಸಲಿದ್ದಾರೆ.

ಸ್ಪೇನ್‌ನ ಮುಗುರುಝ ರಶ್ಯದ ಸ್ವೆತ್ಲಾನಾ ಕುಝ್ನೆಸೋವಾರನ್ನು 6-2, 5-7, 7-5 ಸೆಟ್‌ಗಳಿಂದ ಮಣಿಸುವುದರೊಂದಿಗೆ ಅಂತಿಮ-4ರ ಸುತ್ತು ಪ್ರವೇಶಿಸಿದ್ದಾರೆ.

ದ್ವಿತೀಯ ರ್ಯಾಂಕಿನ ರೊಮಾನಿಯದ ಸಿಮೊನಾ ಹಾಲೆಪ್ ಬ್ರಿಟನ್‌ನ ಏಳನೆ ಶ್ರೇಯಾಂಕದ ಜೊಹನ್ನಾ ಕೊಂಟಾರನ್ನು 6-4, 7-6(7/1) ಸೆಟ್‌ಗಳಿಂದ ಸೋಲಿಸುವುದರೊಂದಿಗೆ ಸೆಮಿಫೈನಲ್‌ಗೆ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News