ದ್ರೋಣಾಚಾರ್ಯ ಪ್ರಶಸ್ತಿಗೆ ಪರಿಗಣಿಸದಿರುವುದು ತಪ್ಪು: ಸತ್ಯನಾರಾಯಣ

Update: 2017-08-19 18:51 GMT

ಹೊಸದಿಲ್ಲಿ, ಆ.19: ‘‘ದಿಲ್ಲಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ನನ್ನ ಮೇಲೆ ಚಾರ್ಜ್‌ಶೀಟ್ ದಾಖಲಾಲ್ಲ. ನನ್ನನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಪರಿಗಣಿಸದಿರುವುದು ತಪ್ಪು ನಿರ್ಧಾರವಾಗಿದೆ’’ ಎಂದು ಭಾರತದ ಪ್ಯಾರಾ-ಸ್ಪೋರ್ಟ್ಸ್‌ಕೋಚ್ ಸತ್ಯನಾರಾಯಣ ಶಿವಮೊಗ್ಗ ಹೇಳಿದ್ದಾರೆ.

ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಚೆನ್ನೈನ ಮರಿಯಪ್ಪನ್ ತಂಗವೇಲುಗೆ ಕೋಚಿಂಗ್ ನೀಡಿರುವ ಸತ್ಯನಾರಾಯಣ ಹೆಸರನ್ನು ಈ ಹಿಂದೆ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ದಿಲ್ಲಿಯ ಸಾಕೇತ್‌ನಲ್ಲಿನ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಸತ್ಯನಾರಾಯಣ ವಿರುದ್ಧ ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಈ ವರ್ಷದ ದ್ರೋಣಾಚಾರ್ಯ ಪ್ರಶಸ್ತಿ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ.

 ‘‘ನನ್ನ ಸಾಧನೆ ನೋಡಿ ಕೆಲವರಿಗೆ ಮತ್ಸರವಾಗಿದೆ. ಈ ಹಿನ್ನೆಲೆಯಲ್ಲಿ ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮಾನನಷ್ಟ ಮೊಕದ್ದಮೆ ದಾಖಲಾಗಿರುವ ಕಾರಣದಿಂದ ನನ್ನ ಹೆಸರನ್ನು ಪ್ರಶಸ್ತಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮಾಧ್ಯಮ ವರದಿ ಕೇಳಿ ನನಗೆ ಆಘಾತವಾಗಿದೆ. ಭಾರತದ ಪ್ಯಾರಾಲಿಂಪಿಕ್ ಸಮಿತಿ(ಪಿಸಿಐ) ಮಾಜಿ ಅಧ್ಯಕ್ಷ ರಾಜೇಶ್ ಥೋಮರ್ ದುರಾಡಳಿತ ಹಾಗೂ ಹಣಕಾಸು ಅವ್ಯವಹಾರದ ಆರೋಪದಲ್ಲಿ 2015ರಲ್ಲಿ ಪಿಸಿಐಯಿಂದ ಹೊರಹಾಕಲ್ಪಟ್ಟಿದ್ದರು. ಇದೇ ವಿಷಯದಲ್ಲಿ ನನ್ನ ಮೇಲೆ ಸೇಡುತೀರಿಸಿಕೊಳ್ಳಲು ಥೋಮರ್ ನನ್ನ ವಿರುದ್ಧ ಸಾಕೇತ್ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಈ ಪ್ರಕರಣ ಚಾರ್ಜ್‌ಶೀಟ್ ಸಲ್ಲಿಸುವ ಹಂತ ತಲುಪಿಲ್ಲ. ಕೇವಲ ಸಮನ್ಸ್ ಮಾತ್ರ ನೀಡಲಾಗಿದೆ. ಇದೇ ಕಾರಣಕ್ಕೆ ನನಗೆ ದ್ರೋಣಾಚಾರ್ಯ ಪ್ರಶಸ್ತಿ ನಿರಾಕರಿಸಿದರೆ ಅದು ದೊಡ್ಡ ತಪ್ಪಾಗುತ್ತದೆ’’ ಎಂದು ಸತ್ಯನಾರಾಯಣ ಹೇಳಿದ್ದಾರೆ.

ಈ ಹಿಂದೆ ಪಿಸಿಐ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದ ಸತ್ಯನಾರಾಯಣ ಕ್ರೀಡಾ ಸಚಿವ ವಿಜಯ್ ಗೋಯೆಲ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಪಿ.ಗೋಪಿಚಂದ್‌ಗೆ ಪತ್ರ ಬರೆದು ತನ್ನ ವಿರುದ್ಧದ ಆರೋಪಕ್ಕೆ ಉತ್ತರ ನೀಡಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ.

‘‘ಪ್ರಶಸ್ತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲಾರೆ. ಕ್ರೀಡಾ ಸಚಿವಾಲಯದ ನಿರ್ಧಾರವನ್ನು ಗೌರವಿಸುವೆ. ನಾನು ಏನೂ ತಪ್ಪು ಮಾಡಿಲ್ಲವೆಂದು ವಿಶ್ವಕ್ಕೆ ತಿಳಿಸಲು ಬಯಸುತ್ತೇನೆ. ನಾನು ಇಷ್ಟೊಂದು ಸಾಧನೆ ಮಾಡಿದ್ದರೂ ಪ್ರಶಸ್ತಿ ನಿರಾಕರಿಸಿದ್ದಕ್ಕೆ ಬೇಸರವಾಗಿದೆ’’ ಎಂದು ಸತ್ಯನಾರಾಯಣ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News