ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಶುಭಾರಂಭ

Update: 2017-08-21 18:09 GMT

ಗ್ಲಾಸ್ಗೋ, ಆ. 21: ಉತ್ತಮ ಫಾರ್ಮ್‌ನಲ್ಲಿರುವ ಭಾರತದ ಅಗ್ರ ಶ್ರೇಯಾಂಕದ ಬ್ಯಾಡ್ಮಿಂಟನ್ ಆಟಗಾರ ಕೆ. ಶ್ರೀಕಾಂತ್ ಅವರು ಇಲ್ಲಿ ಸೋಮವಾರ ಆರಂಭಗೊಂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಕೆ.ಶ್ರೀಕಾಂತ್ ಅವರು ರಶ್ಯದ ಶ್ರೇಯಾಂಕರಹಿತ ಸೆರ್ಗೆಯಿ ಸಿರಾಂಟ್ ವಿರುದ್ಧ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 21-13, 21-12 ಅಂತರದಲ್ಲಿ ಜಯ ಗಳಿಸಿ ಎರಡನೆ ಸುತ್ತಿನಲ್ಲಿ ಅವಕಾಶ ದೃಢಪಡಿಸಿದರು.

  ಭಾರತದ ಎಂಟನೆ ಶ್ರೇಯಾಂಕದ ಶ್ರೀಕಾಂತ್ ಅವರ ವಿರುದ್ಧ ರಶ್ಯದ ಆಟಗಾರನ ಹೋರಾಟ ಕೇವಲ 28 ನಿಮಿಷಗಳಲ್ಲಿ ಕೊನೆಗೊಂಡಿತು. ಶ್ರೀಕಾಂತ್ ಎರಡನೆ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ನ ಲುಕಾಸ್ ಕಾರ್ವೆ ಅವರನ್ನು ಎದುರಿಸುವರು.

ಸಾವಂತ್‌ಗೆ ಜಯ:

 ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಭಾರತದ ಪ್ರಜಕ್ತಾ ಸಾವಂತ್ ಮತ್ತು ಮಲೇಷ್ಯಾದ ಯೋಗೇಂದ್ರನ್ ಕೃಷ್ಣನ್ ಅವರು ಚೈನೀಸ್ ತೈಪೆಯ ಕಾಯ್ ಸಿನ್ ಮತ್ತು ಚಿಂಗ್ ಯೋ ವಿರುದ್ಧ 21-15, 13-21, 21-18 ಅಂತರದಲ್ಲಿ ಜಯ ಗಳಿಸಿದರು. ಇನ್ನೊಂದು ಮಿಶ್ರ ಡಬಲ್ಸ್ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಕೆ.ಮನೀಶಾ ಅವರು ಹಾಂಕಾಂಗ್‌ನ ಟಾಮ್ ಹೀ ಮತ್ತು ಯಂಗ್ ಯಾವ್ ವಿರುದ್ಧ 24-22, 21-17 ಅಂತರದಲ್ಲಿ ಜಯ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News